ಬೆಂಗಳೂರು: ಗುತ್ತಿಗೆ ಹಣ ಪಾವತಿಯಲ್ಲಿ 4.42 ಕೋಟಿ ರೂ.ಗಳನ್ನು ಬೇರೆ ಖಾತೆಗೆ ಹಣ ವರ್ಗಾವಣೆ ವಿಚಾರವಾಗಿ ಸಂಬಂಧಿಸಿದ ಬ್ಯಾಂಕ್ಗಳ ಮ್ಯಾನೇಜರ್ಗಳು ಸೇರಿ ನಾಲ್ವರ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ.
ಸಿ. ಚಂದ್ರಪ್ಪ ಎಂಬ ಗುತ್ತಿಗೆದಾರನಿಗೆ ನೀಡಬೇಕಾದ ಹಣವನ್ನು ಬಿಬಿಎಂಪಿ ಲೆಕ್ಕ ಅಧೀಕ್ಷಕರು ಸೇರಿ ಹಲವರು ನಕಲಿ ಖಾತೆ ಸೃಷ್ಟಿಸಿ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಈಗಾಗಲೇ 4 ಜನರನ್ನು ಬಂಧಿಸಲಾಗಿದೆ. ಈಗ ಮತ್ತೆ ಎಚ್ಡಿಎಫ್ಸಿ, ಜನತಾ ಕೋ- ಆಪರೇಟಿವ್ ಬ್ಯಾಂಕ್ನ ಹಂಪಿನಗರ ಶಾಖೆ ಮ್ಯಾನೇಜರ್, ಗುತ್ತಿಗೆದಾರ ಮಂಜುನಾಥ್, ಪೌರಕಾರ್ವಿುಕ ಸಂಘದ ಮುಖಂಡ ನಲ್ಲಪ್ಪ ಅವರ ಬಂಧನಕ್ಕೆ ಬಿಎಂಟಿಎಫ್ ಪೊಲೀಸರು ವಾರಂಟ್ ನೀಡಿದ್ದಾರೆ. ಪಾಲಿಕೆ ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಹಣ ವರ್ಗಾವಣೆ ಮಾಡಲಾಗಿರುವ ದಾಖಲೆ ತೆಗೆದುಕೊಂಡು ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸಿಬಿಗೆ ವಹಿಸುವಂತೆ ಒತ್ತಾಯ: ಪಾಲಿಯ ಅಕ್ರಮ ಹಣ ವರ್ಗಾವಣೆಯಲ್ಲಿ ಮಾಜಿ ಮೇಯರ್ ಸೇರಿ ಹಲವು ಪಾಲಿಕೆ ಸದಸ್ಯರ ಸಂಬಂಧಿಕರು ಭಾಗಿಯಾಗಿದ್ದಾರೆ. ಬಿಎಂಟಿಎಫ್ ಪೊಲೀಸರಿಂದ ವಿಚಾರಣೆ ನಡೆದರೆ ಪ್ರಕರಣ ಮುಚ್ಚಿಹಾಕುವ ಅನುಮಾನವಿದೆ. ಹಾಗಾಗಿ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸುವಂತೆ ಪಾಲಿಕೆ ಸದಸ್ಯರು ಒತ್ತಾಯಿಸಿದ್ದಾರೆ.