ಜಿಲ್ಲೆ

ಗ್ರಾಹಕರನ್ನು ವಂಚಿಸಿ ಪರಾರಿಯಾದವನನ್ನು ಕೂಡಲೇ ಬಂಧಿಸಿ

ಸೋಮವಾರಪೇಟೆ: ಪಟ್ಟಣದಲ್ಲಿದ್ದ ಖಾಸಗಿ ಟ್ರೇಡರ್ಸ್‌ನ ಮಾಲೀಕನೊಬ್ಬ ಗ್ರಾಹಕರಿಗೆ ಒಂದೂವರೆ ಕೋಟಿಯಷ್ಟು ಹಣವನ್ನು ವಂಚಿಸಿ ಪರಾರಿಯಾಗಿ 19 ದಿನ ಕಳೆದರೂ, ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಮುಂದಿನ 5 ದಿನಗಳ ಒಳಗೆ ಬಂಧಿಸದಿದ್ದರೆ ಎಸ್‌ಪಿ ಕಚೇರಿ ಮುಂಭಾಗ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಹಣ ಕಳೆದುಕೊಂಡವರು ಎಚ್ಚರಿಸಿದರು.

ತಮಿಳುನಾಡು ಮೂಲದ ಬಾಬು ಕೇಶವನ್ ಎಂಬಾತ ಪಟ್ಟಣ ಪಂಚಾಯಿತಿ ವತಿಯಿಂದ ವ್ಯಾಪಾರೋದ್ಯಮ ಪರವಾನಗಿ ಪಡೆದು ಪಿಠೋಪಕರಣಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಸಂಶಯಗೊಂಡ ಚೇಂಬರ್ಸ್‌ ಆಫ್ ಕಾಮರ್ಸ್ ಪದಾಧಿಕಾರಿಗಳು ಕಳೆದ ಡಿಸೆಂಬರ್ 28ರಂದು ಪಟ್ಟಣದ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಪೊಲೀಸ್ ಅಧಿಕಾರಿಗಳು ಅಂದೇ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಬಹುದಿತ್ತು.ಡಿ.31ರಂದು ಬೆಳಗ್ಗೆ ಆರೋಪಿ ಬಾಬುಕೇಶವನ್ ನಾಪತ್ತೆಯಾಗಿದ್ದಾನೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರವೇ ಅಧ್ಯಕ್ಷ ಕೆ.ಎನ್.ದೀಪಕ್ ಹೇಳಿದರು.

ಅರೋಪಿ ಪರಾರಿಯಾದ ನಂತರ ಪಿಠೋಪಕರಣಗಳಿಗೆ ಮುಂಗಡ ಹಣ ಕೊಟ್ಟಿದ್ದ ನೊಂದವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಸುಮಾರು 350 ಗ್ರಾಹಕರಿಂದ ಮುಂಗಡ ಹಣವನ್ನು ಆರೋಪಿ ಪಡೆದುಕೊಂಡಿದ್ದಾನೆ. ಅನೇಕರು ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ. ಅನೇಕರು ಸೂಕ್ತ ದಾಖಲೆಗಳನ್ನು ನೀಡಿದ್ದಾರೆ. ವಂಚಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕಾಗಿದ್ದ ಪೊಲೀಸರು ವಿಳಂಬ ಧೋರಣೆ ಅನುಸರಿಸಿರುವುದು ದೂರುದಾರರಿಗೆ ನೋವು ತಂದಿದೆ. ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತಂಡವನ್ನು ರಚಿಸಿ, ವಂಚಕನನ್ನು ಬಂಧಿಸಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

15 ದಿನದ ಹಿಂದೆ ಕರವೇ ಪದಾಧಿಕಾರಿಗಳು ಮತ್ತು ಹಣ ಕಳೆದುಕೊಂಡವರು ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಭೇಟಿ ಮಾಡಿ, ಪ್ರಕರಣ ದಾಖಲಿಸಿಕೊಂಡು ಅರೋಪಿಯನ್ನು ಬಂಧಿಸುವಂತೆ ಮನವಿ ಮಾಡಿಕೊಂಡಾಗ, ಅಧಿಕಾರಿ ಆಶಾದಾಯಕ ಭರವಸೆ ನೀಡಿದ್ದರು. ಹಣ ಕಳೆದುಕೊಂಡವರು ಠಾಣೆಗೆ ತೆರಳಿ ಮಾಹಿತಿ ಕೇಳಿದಾಗ, ಕೆಲ ಸಿಬ್ಬಂದಿ ಸೂಕ್ತ ಮಾಹಿತಿ ನೀಡುತ್ತಿಲ್ಲ. ನೀವೇ ಹುಡುಕಿ ಕೊಡಿ ಎಂದು ಹೇಳುತ್ತಿದ್ದಾರೆ. ಪೊಲೀಸ್ ಇಲಾಖೆ ಇರುವುದೇ ವಂಚಕರಿಗೆ ಶಿಕ್ಷೆ ಕೊಡಿಸಲು. ಹಣ ಕಳೆದುಕೊಂಡವರು ನಿಯಮದಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಮಾಡಿ ನ್ಯಾಯ ಕೊಡಿಸುವುದು ಅವರ ಕರ್ತವ್ಯ ಎಂದು ಹೇಳಿದರು.

ಗೋಷ್ಠಿಯಲ್ಲಿ ಕರವೇ ನಗರ ಅಧ್ಯಕ್ಷ ಮಂಜುನಾಥ್, ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಅಸೋಸಿಯೇಷನ್ ಅಧ್ಯಕ್ಷ ವಸಂತ್, ಪಟ್ಟಣ ನಿವಾಸಿಗಳಾದ ಲಿಖಿತ್ ರಮೇಶ್, ಇಂದಿರಾ ಇದ್ದರು.