ಜಿಲ್ಲೆ

ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಕಾಣದ ಕೈಗಳನ್ನು ಬಂಧಿಸಿ : ಮಾಜಿ ಸಚಿವ ಸಾ.ರಾ.ಮಹೇಶ್

ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸುವುದರ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸರ್ಕಾರವನ್ನು ಒತ್ತಾಯಿಸಿದರು.

ದಕ್ಷಿಣ ಭಾರತದ ಬಹುದೊಡ್ಡ ಹಿಂದು ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಪಾವಿತ್ರ್ಯತೆ, ಭಕ್ತರ ನಂಬಿಕೆಗೆ ಅಪಚಾರ ಎಸಗುವ ಜತೆಗೆ ದೊಡ್ಡ ಕಪ್ಪುಚುಕ್ಕೆ ತರಲು ಯತ್ನಿಸಿದ ಅನಾಮಿಕನನ್ನು ಬಂಧಿಸಿದರೆ ಸಾಲದು. ಷಡ್ಯಂತ್ರದ ಹಿಂದಿನ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯ ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಿರುವುದು ನಿಜವಾಗಿದ್ದಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ಸತ್ಯವನ್ನು ಹೊರತರಬೇಕು. ನೂರಾರು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ದಾಸೋಹ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದಿರುವ ಧರ್ಮಸ್ಥಳ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮೂಲಕ ಸಾವಿರಾರು ಸಂಘಗಳನ್ನು ರಚಿಸಿ ನೆರವಾಗಿದ್ದಾರೆ ಎಂದರು.

ಕೆ.ಆರ್.ನಗರದಲ್ಲಿ ಈ ಟ್ರಸ್ಟ್ ಮೂಲಕ ಐದು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ದೇವಾಲಯಗಳನ್ನು ಸುಂದರಗೊಳಿಸಿದ್ದಾರೆ. ಆದರೆ ಕೆಲವರು ಷಡ್ಯಂತ್ರದ ಮೂಲಕ ಅಪಪ್ರಚಾರಕ್ಕೆ ಮುಂದಾಗಿದ್ದರು. ಎಸ್‌ಐಟಿ ತನಿಖೆ ನಡೆಯುತ್ತಿರುವ ಕಾರಣ ನಾವು ಈ ಬಗ್ಗೆ ಚರ್ಚೆ ಮಾಡಿರಲಿಲ್ಲ. ಹಸ್ತಕ್ಷೇಪ ಯಾರೂ ಮಾಡಿಲ್ಲ. ಆದರೆ ಈಗ ಅನಾಮಿಕನನ್ನು ಬಂಧಿಸಿದ ಮೇಲೆ ಅನಿವಾರ್ಯವಾಗಿ ಜನರಿಗೆ ಸತ್ಯಾಂಶವನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಒಬ್ಬರೇ ಒಂದು ಶವವನ್ನು ಹೂಳುವುದೆ ಕಷ್ಟಕರ. ಅಂತಹದರಲ್ಲಿ ನೂರಾರು ಶವಗಳನ್ನು ಒಬ್ಬನೇ ಹೂಳು ತೆಗೆದು ನಾಲ್ಕು ಅಡಿ ಹಳ್ಳದಲ್ಲಿ ಸಂಸ್ಕಾರ ಮಾಡಲು ಸಾಧವೇ. ಈ ಬಗ್ಗೆ ಚಿಂತಿಸದೆ ದೂರುದಾರ ಬಂದು ಹೇಳಿದಾಗ ಎಸ್‌ಐಟಿ ಅಧಿಕಾರಿಗಳು ಹಗೆಯಲು ಆರಂಭಿಸಿದ್ದು, ಎಷ್ಟು ಸರಿ ಎಂದು ಹೇಳಿದರು.

ಧರ್ಮಸ್ಥಳಕ್ಕೆ ಕಾರು ರ‌್ಯಾಲಿ:

ಧರ್ಮಸ್ಥಳದ ಪಾವಿತ್ರ್ಯತೆ ಉಳಿಸುವ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಬೆಂಬಲವನ್ನು ನೀಡಲು ಆ.25ರಂದು ಧರ್ಮಸ್ಥಳಕ್ಕೆ ಕಾರು ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಮಂಡ್ಯದಿಂದ ರ‌್ಯಾಲಿ ಆಗಮಿಸಲಿದ್ದು, ಇಲವಾಲಕ್ಕೆ ಬರಲಿದೆ. ಇದಕ್ಕೆ ಪೂರಕವಾಗಿ ದಟ್ಟಗಳ್ಳಿಯ ಸಾರಾ ಕಲ್ಯಾಣ ಮಂಟಪದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೈಸೂರಿನಿಂದಲೂ ರ‌್ಯಾಲಿ ಹೊರಟು ಇಲವಾಲದಲ್ಲಿ ಮಂಡ್ಯದಿಂದ ಬಂದ ಕಾರುಗಳ ಜತೆ ಸೇರಿ ಮುಂದೆ ಕೆ.ಆರ್.ನಗರ ಮೂಲಕ ಸಾಗಲಾಗುವುದು. ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು, ಧರ್ಮಾಧಿಕಾರಿಗಳನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು.

ನಾಲ್ವಡಿಗೆ ಹೋಲಿಕೆ ಸಲ್ಲದು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ. ಸಚಿವಗಿರಿ, ನಿಗಮ, ಮಂಡಳಿಗಳಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಓಲೈಕೆ ಮಾತುಗಳನ್ನಾಡುವುದು ಸಹಜ. ಆದರೆ ಸಿಎಂ ಪುತ್ರನಾಗಿರುವ ವೈದ್ಯ ಡಾ.ಯತೀಂದ್ರ ಹೋಲಿಸಿ ಮಾತನಾಡಿದ್ದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಅವರು ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಯಾವುದನ್ನು ಮಾಡಿಯೇ ಇಲ್ಲ ಎನ್ನುವುದಿಲ್ಲ. ಆದರೆ ನಾಲ್ವಡಿ ತಮ್ಮ ಚಿನ್ನವನ್ನು ಅಡವಿಗಿಟ್ಟು ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡಿದರೆ, ಸಿದ್ದರಾಮಯ್ಯ ಅವರು ಬೇಕಾಬಿಟ್ಟಿಯಾಗಿ ಸಾಲ ಮಾಡಿ ರಾಜ್ಯದ ಜನರ ಮೇಲೆ ಭಾರ ಹೊರಿಸಿದ್ದಾರೆ ಎಂದು ಟೀಕಿಸಿದರು.

ಮಾಜಿ ಮೇಯರ್ ಆರ್. ಲಿಂಗಪ್ಪ, ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಎಸ್. ಶೋಭಾ, ಭಾಗ್ಯಾ ಮಹದೇಶ್, ಅಶ್ವಿನಿ ಅನಂತು, ಶಿವಣ್ಣ, ಕೃಷ್ಣ, ಜಿಪಂ ಮಾಜಿ ಸದಸ್ಯ ಸಿ.ಜೆ. ದ್ವಾರಕೀಶ್, ಹಿರಿಯ ಉಪಾಧ್ಯಕ್ಷ ಫಾಲ್ಕಾನ್ ಬೋರೇಗೌಡ, ರಾಮು ಇದ್ದರು.