ಜಿಲ್ಲೆ

ಪತಿ ಕೊಲೆಗೈದ ಪತ್ನಿ, ಪ್ರಿಯಕರನ ಬಂಧನ

ಹಿರೇಕೆರೂರ: ತಾಲೂಕಿನ ಚಿಕ್ಕೇರೂರ-ಯಲ್ಲಾಪುರದಲ್ಲಿ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಸಾವಿನ ಪ್ರಕರಣ ಭೇದಿಸುವಲ್ಲಿ ಹಂಸಭಾವಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ಕೊಲೆಯಾದವನ ಪತ್ನಿ ಉಮ್ಮಿಸಲ್ಮಾ ಚಿಕ್ಕಮತ್ತೂರ ಹಾಗೂ ಈಕೆಯ ಪ್ರಿಯಕರ ಜಾಫರಸಾದಿಕ್ ಸತ್ತರಸಾಬ್ ಶೇತಸನದಿ ಬಂಧಿತರು.
ಗ್ರಾಮದ ಸಾದಿಕ್ ಚಿಕ್ಕಮತ್ತೂರ (30) ಸೆ. 25ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ಮೃತಪಟ್ಟಿದ್ದ ಎನ್ನಲಾಗಿತ್ತು.

ಮೃತನ ತಲೆಯ ಹಿಂದೆ ಮತ್ತು ಕುತ್ತಿಗೆ ಮೇಲಿನ ಗಾಯದ ಗುರುತು ಗಮನಿಸಿದ ಆತನ ತಂದೆ ಹುಸೇನಮೀಯಾ ಅವರು, ತನ್ನ ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಕೊಲೆಯಾದವನ ಪತ್ನಿ ಉಮ್ಮಿಸಲ್ಮಾ ಜತೆಗೆ ಜಾಫರಸಾದಿಕ್ ಶೇತಸನದಿ ಅನೈತಿಕ ಸಂಬಂಧ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಸಾದಿಕ್ ಜತೆಗೆ ಸ್ನೇಹ ಬೆಳಸಿಕೊಂಡಿದ್ದ ಜಾಫರಸಾದಿಕ್ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಪತ್ನಿಯ ಜತೆಗೆ ಸಲುಗೆಯಿಂದ ವರ್ತಿಸುತ್ತಿದ್ದ ಜಾಫರಸಾದಿಕ್​ನಿಗೆ ಮನೆಗೆ ಬಾರದಂತೆ ಸಾದಿಕ್ ಹೇಳಿದ್ದ ಎನ್ನಲಾಗಿದೆ. ಇದರಿಂದ ಕೊಪಗೊಂಡಿದ್ದ ಜಾಫರಸಾದಿಕ್ ಮತ್ತು ಮೃತನ ಪತ್ನಿ ಉಮ್ಮಿಸಲ್ಮಾ ಜತೆ ಸೇರಿಕೊಂಡು ಸಾದಿಕ್​ನ ತಲೆಯ ಹಿಂಭಾಗಕ್ಕೆ ಆಯುಧದಿಂದ ಹೊಡೆದು, ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದರು. ಅಲ್ಲದೆ, ಶವವನ್ನು ಸ್ನಾನದ ಕೋಣೆಯಲ್ಲಿ ಹಾಕಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಕತೆ ಕಟ್ಟಿದ್ದರು.


ಈ ಸಂಬಂಧ ಪೊಲೀಸರು ತನಿಖೆ ನಡೆಸಿ, ಸಾದಿಕ್​ನದ್ದು ಆಕಸ್ಮಿಕ ಸಾವಲ್ಲ, ಪತ್ನಿಯ ಅನೈತಿಕ ಸಂಬಂಧದಿಂದ ನಡೆದ ಕೊಲೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.