ಗುಳೇದಗುಡ್ಡ: ಸ್ಥಳೀಯ ಬಸ್ ನಿಲ್ದಾಣ ಬಳಿಯ ಟಯರ್ ಅಂಗಡಿ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಬುಧವಾರ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಎಂದು ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜು.1ರಂದು ರಾತ್ರಿ ನಗರದ ಬಸ್ ನಿಲ್ದಾಣ ಬಳಿಯ ಉಮೇಶ ಹುನಗುಂದ ಅವರ ಟಯರ್ ಅಂಗಡಿಯಲ್ಲಿನ 53,000 ನಗದು, 42 ಸಾವಿರ ರೂ. ಕಿಮ್ಮತ್ತಿನ 33 ಟಯರ್‌ಗಳು ಹಾಗೂ ಒಂದು ಸ್ಕೂಟಿ ಕಳ್ಳತನ ಮಾಡಲಾಗಿತ್ತು. ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜಿಲ್ಲಾ ಪೊಲಿಇಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಹೆಚ್ಚುವರಿ ಎಸ್.ಪಿ. ಪ್ರಸನ್ನಕುಮಾರ ದೇಸಾಯಿ, ಸಿಪಿಐ ಡಿ.ಡಿ. ಧೂಳಖೇಡ್ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಪಿಎಸ್‌ಐ ಲಕ್ಷ್ಮಣ ಆರಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಪಟ್ಟಣದ ಯಮನೂರಪ್ಪ ರಮೇಶ ಗಚ್ಚಿನಮನಿ, ಕೋಟೆಕಲ್ಲನ ರಮೇಶ ರಂಗಪ್ಪ ಶಾಂತಗೇರಿ ಅವರನ್ನು ಬಂಧಿಸಿ 77 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಹಾಗೂ 5000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕ್ರೈಂ ವಿಭಾಗದ ಪಿಎಸ್‌ಐ ಚಂದ್ರಶೇಖರ ಕಿರಸ್ಯಾಳ, ಎಸ್.ಐ. ಬಿಳೆಕುದರಿ, ಎಂ.ಎ. ಘಂಟಿ, ಎಚ್.ಪಿ. ಕೊಗಟಿ, ಜಿ.ವಿ. ಮನ್ನಿಕಟ್ಟಿ, ವೈ.ಎಂ. ಮನ್ನಿಕಟ್ಟಿ, ವಿಜಯ ತುಂಬದ, ಶರಣಪ್ಪ ಕೊಡ್ಲಪ್ಪನವರ, ಆನಂದ ಬಿಂಜವಾಡಗಿ, ನಾಗರಾಜ ಕುಂದರಗಿ ಇತರರಿದ್ದರು.