ಸಿದ್ದಾಪುರ: ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ಕೊಳತ್ತೋಡು ಬೈಗೋಡು ಗ್ರಾಮದ ಸಮೀಪ ಗೋಣಿಕೊಪ್ಪ-ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಬೀಟೆ ಮರದ 50 ನಾಟಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಶನಿವಾರ ಅರಣ್ಯಾಧಿಕಾರಿಗಳು ಬಂಧಿಸಿ, ನಾಟಗಳನ್ನು ವಾಹನ ಸಮೇತ ವಶಪಡಿಸಿಕೊಂಡಿದ್ದಾರೆ.
ವಿರಾಜಪೇಟೆಯ ಜೈನರ್ ಬೀದಿ ನಿವಾಸಿ ಕೆ.ಆರ್.ಪ್ರದೀಪ್ ಹಾಗೂ ಬಿಟ್ಟಂಗಾಲ ನಿವಾಸಿ ಪಿ.ಎಸ್.ಅರ್ಜುನ್ ಬಂಧಿತ ಆರೋಪಿಗಳು. ಇತರ ಆರೋಪಿಗಳಾದ ಮಡಿಕೇರಿ ರಾಣಿಪೇಟ ನಿವಾಸಿ ಸಲೀಂ, ನೆಹರುನಗರದ ನಿವಾಸಿ ಅಬ್ದುಲ್ ಜಬ್ಬಾರ್ ಮತ್ತು ವಿರಾಜಪೇಟೆ ಸಿಲ್ವ ನಗರದ ನಿವಾಸಿ ಫಾರೂಕ್ ತಲೆಮರೆಸಿಕೊಂಡಿದ್ದಾರೆ.
ಡಿಸಿಎಫ್ ಬಿ.ಎಂ. ಶರಣಬಸಪ್ಪ ಮತ್ತು ಎಸಿಎಫ್ ಕೊಚ್ಚೆರ ಎ. ನೆಹರು ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಆರ್‌ಎಫ್‌ಒ ಕಳ್ಳಿರ ಎಂ. ದೇವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ದೇಯಂಡ ಸಂಜಿತ್ ಸೋಮಯ್ಯ, ಕೆ.ಆನಂದ, ಆರ್.ಅನಿಲ್, ಮಾದಂಡ ಮೋನಿಷಾ, ಸಚಿನ್ ನಿಂಬಾಳ್ಕರ್. ಅರಣ್ಯ ರಕ್ಷಕರಾದ ಸಿ.ಅರುಣ್, ಚಂದ್ರಶೇಖರ ಅಮರಗೋಳ, ಮಾಲತೇಶ್ ಬಡಿಗೇರ ಇತರರು ಭಾಗವಹಿಸಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.