ಬೆಂಗಳೂರು: ಬೀಗದ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗುತ್ತಿದ್ದ ನೇಪಾಳ ಮೂಲದ ಇಬ್ಬರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಿತ್ತಗನೂರು ನಿವಾಸಿಗಳಾದ ಮೋಹನ್ ಬಿ.ವಿಶ್ವಕರ್ಮ(೨೯) ಮತ್ತು ಗೋರಖ್ ವಿಶ್ವಕರ್ಮ(೩೮) ಬಂಧಿತರು. ಆರೋಪಿಗಳಿಂದ ೧೦.೩೦ ಲಕ್ಷ ರೂ. ಮೌಲ್ಯದ ೧೨೪ ಗ್ರಾಂ ಚಿನ್ನಾಭರಣ, ೩ ಕೆ.ಜಿ. ೨೦೦ ಗ್ರಾಂ ಬೆಳ್ಳಿ ವಸ್ತುಗಳು, ೨ ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಹೆಸರಘಟ್ಟದ ದಾಸೇನಹಳ್ಳಿ ಕ್ರಾಸ್ ನಿವಾಸಿ ಅಮಿತ್ ಭೀಮಯ್ಯ ಎಂಬುವವರು ಕಳೆದ ಜುಲೈನಲ್ಲಿ ಮನೆಗೆ ಬೀಗ ಹಾಕಿಕೊಂಡು ತಮ್ಮ ಊರಿಗೆ ತೆರಳಿದ್ದರು. ಕೆಲ ದಿನಗಳ ಬಳಿಕ ವಾಪಾಸ್ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತಾಯಿತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗಳವು ಮಾಡಿ ಜೈಲು ಸೇರಿದ್ದ:
ಬಂಧಿತ ಇಬ್ಬರು ಆರೋಪಿಗಳ ಪೈಕಿ ಮೊದಲ ಆರೋಪಿ ಮೋಹನ್ ಕೆಲವು ವರ್ಷಗಳ ಹಿಂದೆ ನೇಪಾಳದಿಂದ ಮುಂಬೈಗೆ ಬಂದು ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಮುಂಬೈನಲ್ಲಿ ಐದು ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದ. ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಎರಡನೇ ಆರೋಪಿ ಗೋರಖ್‌ನನ್ನು ಸಂಪರ್ಕಿಸಿ ಮುಂಬೈನಿಂದ ನಗರಕ್ಕೆ ಬಂದು ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಸೇರಿಕೊಂಡಿದ್ದ. ಇದೇ ವರ್ಷದ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಮನೆಗಳವು ಮಾಡಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಗೆ ಬಂದಿದ್ದ.
ರಾತ್ರಿ ಬೀಗ ಮುರಿದು ಕಳ್ಳವು:
ಇಬ್ಬರು ಆರೋಪಿಗಳು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ನಗರದ ವಿವಿಧೆಡೆ ಮನೆಗಳವು ಮಾಡುತ್ತಿದ್ದರು. ಹಗಲಿನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ನಗದು, ಆಭರಣಗಳನ್ನು ಕಳ್ಳತನ ಮಾಡುತ್ತಿದ್ದರು. ಇದೀಗ ಆರೋಪಿಗಳ ಬಂಧನದಿಂದ ಪೀಣ್ಯ ಠಾಣೆಯಲ್ಲಿ ದಾಖಲಾಗಿದ್ದ ಒಂದು ಹಾಗೂ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಐದು ಸೇರಿ ಒಟ್ಟು ೬ ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಜಿ.ಗಟ್ಟಲೇ ಚಿನ್ನ ಸಿಕ್ಕರೆ ವಿಮಾನದಲ್ಲಿ ಪರಾರಿ:
ಆರೋಪಿಗಳು ಮನೆಗಳವು ಮಾಡುವಾಗ ಕೆ.ಜಿ.ಗಟ್ಟಲೇ ಚಿನ್ನ ಸಿಕ್ಕರೆ ತಮ್ಮ ದೇಶ ನೇಪಾಳಕ್ಕೆ ವಿಮಾನದಲ್ಲಿ ತೆರಳಿ ವಿಲೇವಾರಿ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಕಡಿಮೆ ಚಿನ್ನ ಸಿಕ್ಕ ಹಿನ್ನೆಲೆಯಲ್ಲಿ ನಗರದಲ್ಲೇ ಉಳಿದಿದ್ದರು. ಬೇರೆ ಮನೆಗಳಲ್ಲಿ ಕಳ್ಳತನ ಮಾಡಿ ಹೆಚ್ಚಿನ ಚಿನ್ನ ಸಂಗ್ರಹಿಸಿ ಬಳಿಕ ನೇಪಾಳಕ್ಕೆ ಪರಾರಿಯಾಗಲು ತಯಾರಿ ನಡೆಸಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಮನೆಗಳವು ಪ್ರಕರಣ ಸಂಬಂಧ ಸೋಲದೇವನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಎಚ್.ಹರಿಯಪ್ಪ ನೇತೃತ್ವದಲ್ಲಿ ಪೊಲೀಸರು ತನಿಖೆಗೆ ಇಳಿದಾಗ ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ದಾಸೇನಹಳ್ಳಿ ಕ್ರಾಸ್‌ನಿಂದ ಕಿತ್ತಗನೂರು ವರೆಗೆ ಸುಮಾರು ೨೦ ಕಿ.ಮೀ. ಮಾರ್ಗದಲ್ಲಿ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿಕೊಂಡು ಕೊನೆಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.