ಜಿಲ್ಲೆ

ಯುವಕನಿಗೆ ಇರಿದಿದ್ದ ಇಬ್ಬರ ಬಂಧನ

ಬೆಂಗಳೂರು: ಯುವತಿಯೊಬ್ಬರ ವಿಚಾರಕ್ಕೆ ಜಗಳ ತೆಗೆದು ಯುವಕನಿಗೆ ಚಾಕುವಿನಿಂದ ಇರಿದಿದ್ದ ಇಬ್ಬರು ಆರೋಪಿಗಳನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.
ನಾಯಂಡಹಳ್ಳಿ ನಿವಾಸಿಗಳಾದ ಧನುಷ್(೨೦) ಶಾಬುದ್ದೀನ್(೨೨) ಬಂಧಿತರು. ಹಲ್ಲೆಗೊಳಗಾದ ಯುವಕ ಕಾರ್ತಿಕ್. ಈ ಘಟನೆ ಡಿ.೨೧ ರಂದು ನಾಯಂಡಹಳ್ಳಿ ಸಮೀಪ ವಿನಾಯಕ ಲೇಔಟ್‌ನಲ್ಲಿ ನಡೆದಿತ್ತು.
ತನ್ನ ಪ್ರೇಯಸಿಯ ಜತೆ ಕಾರ್ತಿಕ್ ಫೋನ್‌ನಲ್ಲಿ ಮಾತಾಡಿದ್ದಕ್ಕೆ ಸಿಟ್ಟಿಗೆದ್ದ ಧನುಷ್ ತನ್ನ ಸ್ನೇಹಿತ ಶಾಬುದ್ದೀನ್ ಜತೆ ಸೇರಿ ಕಾರ್ತಿಕ್‌ಗೆ ಚಾಕುವಿನಿಂದ ಇರಿದು, ಮಚ್ಚಿನಿಂದ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಧನುಷ್ ಯುವತಿಯೊಬ್ಬಳ ಜತೆಗೆ ಪ್ರೀತಿಯಲ್ಲಿದ್ದ. ಇದೇ ಯುವತಿಯ ನಂಬರ್ ಪಡೆದ ಕಾರ್ತಿಕ್ ಆಕೆಗೆ ಕರೆ ಮಾಡಿ ಮಾತನಾಡುತ್ತಿದ್ದ. ಹಿಂಬಾಲಿಸಿ ಆಕೆಗೆ ಕಾಟ ಕೊಡುತ್ತಿದ್ದ. ಕಾರ್ತಿಕ್ ಕಾಟದಿಂದ ಬೇಸತ್ತು ಹೋಗಿದ್ದ ಯುವತಿ ಈ ವಿಚಾರವನ್ನು ಧನುಷ್‌ಗೆ ಹೇಳಿದ್ದಳು. ಈ ವಿಚಾರ ಕಿವಿಗೆ ಬೀಳುತ್ತಿದ್ದಂತೆ ಸಿಟ್ಟಿಗೆದ್ದ ಧನುಷ್ ತನ್ನ ಮತ್ತೋರ್ವ ಸ್ನೇಹಿತ ಶಾಬುದ್ದೀನ್‌ನನ್ನು ಜತೆಗೆ ಕರೆದುಕೊಂಡು ಹೋಗಿ ಕಾರ್ತಿಕ್‌ಗೆ ಪಾಠ ಕಲಿಸಬೇಕೆಂದು ಆತನ ಮನೆ ಬಳಿ ಬಂದಿದ್ದಾರೆ.
ಡಿ.೨೧ರ ಸಂಜೆ ೬.೩೦ಕ್ಕೆ ಕಾರ್ತಿಕ್‌ಗೆ ಕರೆ ಮಾಡಿ ಮನೆಯಿಂದ ಹೊರ ಬರುವಂತೆ ಹೇಳಿದ್ದಾರೆ. ಮನೆಯಿಂದ ೫೦೦ ಮೀಟರ್ ದೂರಕ್ಕೆ ಕರೆಸಿಕೊಂಡು ನಂತರ ಮಚ್ಚು, ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್ ತಾನೇ ಬೈಕ್ ಹತ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ದೂರು ದಾಖಲಿಸಿದ್ದ. ಕಾರ್ತಿಕ್ ಹೇಳಿಕೆ ಪಡೆದ ಚಂದ್ರಲೇಔಟ್ ಪೊಲೀಸರು ಎಫ್‌ಐಆರ್ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.