ಜಿಲ್ಲೆ

ಸಾಗುವಾನಿ ಮರಕಡಿತಲೆ ಮಾಡಿದ ಇಬ್ಬರ ಬಂಧನ

ಎನ್.ಆರ್.ಪುರ: ಚಿಕ್ಕ ಅಗ್ರಹಾರ ವಲಯ ವ್ಯಾಪ್ತಿಯ ಅಳೇಹಳ್ಳಿ ಗ್ರಾಮದ 8ನೇ ಮೈಲಿಕಲ್ ಸಮೀಪದ ಕೂಸ್ಗಲ್ ಮೀಸಲು ಅರಣ್ಯದ ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸಾಗಿಸಲು ಪ್ರಯತ್ನಿಸುತ್ತಿದ್ದ ಮೇಲ್‌ಪಾಲ್‌ನ ಮಿಥುನ್, ಕೃಷ್ಣ ಎಂಬುವವರನ್ನು ಅರಣ್ಯಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಸ್ಗಲ್ ಮೀಸಲು ಅರಣ್ಯ ವ್ಯಾಪ್ತಿಯ ಸಾಗುವಾನಿ ನೆಡುತೋಪಿಗೆ ಬಂದು ನೋಡಿದಾಗ ಅಕ್ರವಾಗಿ ಸಾಗುವಾನಿ ಮರ ಕಡಿದು ಸಾಗಾಣಿಕೆಗೆ ಮಾಡಲು ಸಿದ್ದತೆ ಮಾಡಿರುವುದು ಕಂಡು ಬಂದಿದೆ. ಸಾಗಾಣಿಕೆ ಮಾಡಲು ತಂದ ವಾಹನವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶ ಪಡಿಸಿಕೊಂಡು ಸ್ಥಳದಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಸಾಗುವಾನಿ ಮರ ಕಡಿತಲೆ ಪ್ರಕರಣದಲ್ಲಿ ಇತರ 6 ಜನ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದು, ಇತರ ಆರೋಪಿಗಳಾದ ಕೌಶಿಕ್, ಅಕ್ಷಯ, ಅಶ್ವತ್, ರಿಷಿಕಾಂತ, ನವೀನ್,ಆಷಿಕ್ ಎಂಬವವರ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಡಿಎಫ್‌ಒ, ಎಸಿಎಫ್ ಮಾರ್ಗದರ್ಶನದಲ್ಲಿ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ ನೇತೃತ್ವದಲ್ಲಿ ಚಿಕ್ಕಅಗ್ರಹಾರ ಉಪ ವಲಯ ಅರಣ್ಯಾಧಿಕಾರಿ ನಂದೀಶ, ಕುದುರೆಗುಂಡಿ ಉಪ ವಲಯ ಅರಣ್ಯಾಧಿಕಾರಿ ರಂಗನಾಥ, ಗಸ್ತು ಅರಣ್ಯ ಪಾಲಕರಾದ ಆರ್.ಪ್ರತಾಪ್, ಕೆ.ರಂಗನಾಥ, ಎಚ್.ನಾಗರಾಜ, ಎಂ.ಡಿ.ಲೋಹಿತ್, ಚಾಲಕರಾದ ನಾಗರಾಜ, ಪವನ್ ಇದ್ದರು.