ಮಳವಳ್ಳಿ ಠಾಣೆ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ ಎರಡು ಬೈಕ್ ಮತ್ತು ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಕೃಷ್ಣಪ್ಪ, ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್, ಪಿಎಸ್‌ಐಗಳಾದ ಮಹೇಶ್, ಜಯಲಕ್ಷ್ಮಮ್ಮ, ಶ್ರವಣದಾಸ್ ರೆಡ್ಡಿ, ಎ.ಎಸ್.ಐ.ಸುರೇಶ್ ಸಿಬ್ಬಂದಿ ಮಾದೇಶ, ಮನೋಜ್, ಕೌಸಿಕ್, ಉಮೇಶ್, ಮಹದೇವಸ್ವಾಮಿ, ಮಧು ಇದ್ದರು.  
ಜಿಲ್ಲೆ

ಮೂವರು ಕಳ್ಳರ ಬಂಧನ

ಅಭಿನಯ್ ಎಚ್.ಎಂ

ಮಳವಳ್ಳಿ: ಪಟ್ಟಣದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಮೂವರನ್ನು ಬಂಧಿಸಿರುವ ಪಟ್ಟಣ ಠಾಣೆ ಪೊಲೀಸರು, ಎರಡು ಬೈಕ್ ಹಾಗೂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಎನ್‌ಇಎಸ್ ಬಡಾವಣೆ ನಿವಾಸಿಗಳಾದ ಗಿರೀಶ್ ಅಲಿಯಾಸ್ ಡಾಲಿಗುರು, ಶುಭಾಷ್, ಮೈಸೂರು ತಾಲೂಕು ಯರಗನಹಳ್ಳಿ ಗ್ರಾಮದ ಕಿರಣ್ ಬಂಧಿತರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಅ.8ರಂದು ಅನುಮಾನಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಇನ್ಸ್‌ಪೆಕ್ಟರ್ ರವಿಕುಮಾರ್ ವಿಚಾರಣೆ ನಡೆಸಿದಾಗ ವಿವಿಧೆಡೆ ಕಳ್ಳತನ ಮಾಡಿರುವುದನ್ನು ಬಾಯ್ಬಿಟ್ಟಿದ್ದರು. ಈ ಮೂವರು ಇತ್ತೀಚೆಗೆ ತಾಲೂಕಿನ ಅಮೃತೇಶ್ವರನಹಳ್ಳಿಯಲ್ಲಿ ಮಹಿಳೆ ಕಣ್ಣಿಗೆ ಖಾರದಪುಡಿ ಎರಚಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪಾರಾರಿಯಾಗಿದ್ದರು.

ರಾವಣಿ ಹಾಗೂ ಮೈಸೂರು ತಾಲೂಕಿನ ಗ್ರಾಮವೊಂದಲ್ಲಿ ಪ್ರತ್ಯೇಕವಾಗಿ ಬೈಕ್ ಕಳವು ಮಾಡಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಎರಡು ಮತ್ತು ಮೈಸೂರಿನ ಇಲವಾಲ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಡಿವೈಎಸ್ಪಿ ಕೃಷ್ಣಪ್ಪ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚನೆ ಮಾಡಿ ಎರಡು ಬೈಕ್ ಮತ್ತು 25 ಗ್ರಾಂ ಚಿನ್ನದ ಸರವನ್ನು ವಶಕ್ಕೆ ಪಡೆದು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.