ಬ್ಯಾಡಗಿ: ಪಟ್ಟಣದ ವಿದ್ಯಾನಗರ, ನೆಹರು ನಗರ, ಕಾಕೋಳ ರಸ್ತೆ ಸೇರಿದಂತೆ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ತೊಡಗಿದ ಮೂವರು ಆರೋಪಿಗಳನ್ನು ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ.
ಆರೋಪಿಗಳು ರಾಣೆಬೆನ್ನೂರು ಹಾಗೂ ದಾವಣಗೆರೆ ಮೂಲದವರಾಗಿದ್ದು, ಮುಬಾರಕ್ ಹಸನಲಿ ಬ್ಯಾಡಗಿ, ಮಹಮದ್ಸಲೀಮ್ ಮಹಮದ್ರಫೀಕ್ ಹಾವೇರಿ, ಸೈಯದ್ಶೇರ್ ಶೇರವಾನ್ ಸೈಯದ್ಅಹ್ಮದ್ ಎನ್ನಲಾಗಿದೆ. 10 ಬೇರೆ ಬೇರೆ ಪ್ರಕರಣಗಳಲ್ಲಿ ಬಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಡಗಿಯಲ್ಲಿ ಮಂಗಳವಾರ ರಾತ್ರಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. ತಾಲೂಕಿನ ಮೋಟೆಬೆನ್ನೂರು, ಬ್ಯಾಡಗಿ, ರಾಣೆಬೆನ್ನೂರು ಹಾಗೂ ದಾವಣಗೆರೆಗಳಲ್ಲಿ ನಡೆದ ಚಿನ್ನ ಹಾಗೂ ಬೆಳ್ಳಿ, ಬೈಕ್, ವಾಹನ ಕದ್ದ ಆರೋಪಿಗಳ ಜಾಲವನ್ನು ಪೊಲೀಸರು ಚಾಣಾಕ್ಷತನದಿಂದ ಪತ್ತೆ ಹಚ್ಚಿದ್ದಾರೆ. ಬ್ಯಾಡಗಿಯಲ್ಲಿ ಜರುಗಿದ ಇನ್ನೂ ನಾಲ್ಕು ಪ್ರಕರಣಗಳ ಆರೋಪಿಗಳ ಕುರಿತು ತನಿಖೆ ಮುಂದುವರಿದಿದೆ.
210 ಗ್ರಾಮ ಬಂಗಾರದ ಒಡವೆಗಳು ಮೌಲ್ಯ 14.70 ಲಕ್ಷ ರೂ., 1 ಕಿಲೋ 40 ಗ್ರಾಮ ಬೆಳ್ಳಿ ಆಭರಣ ಮೌಲ್ಯ 1 ಲ.ರೂ. ಹಾಗೂ 2 ರಾಯಲ್ ಎನ್ಫೀಲ್ಡ್ ಬೈಕ್, 1 ಹೊಂಡಾ ಬೈಕ್, ಸುಜುಕಿ ಕಂಪನಿಯ ಇಕೋ ಸೇರಿ ವಾಹನಗಳ ಮೌಲ್ಯ 3.5 ಲಕ್ಷ ರೂ. ಅಂದಾಜಿಸಲಾಗಿದೆ. ಒಟ್ಟು 19.20 ಲಕ್ಷ ರೂ. ಕಳವು ಮಾಲು ವಶಪಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಹಗಲು ಹೊತ್ತಿನಲ್ಲೇ ಕಳ್ಳತನ ನಡೆಯುತ್ತಿದ್ದರಿಂದ ಚಿಂತಿತರಾಗಿದ್ದ ಪಟ್ಟಣದ ಜನತೆ ಪೊಲೀಸರ ಕಾರ್ಯಾದಿಂದ ನಿಟ್ಟುಸಿರು ಬಿಡುವಂತಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಡಿಎಸ್ಪಿ ಎಂ.ಎಸ್.ಪಾಟೀಲ, ಸಿಪಿಐ ಮಾಲತೇಶ ಲಂಬಿ, ಪಿಎಸ್ಐ ಸಂತೋಷ ಪವಾರ, ಸಿದ್ಧಾರೂಢ ಬಡಿಗೇರ, ಅರವಿಂದ ಬಿ.ಎಸ್., ಎಎಸ್ಐ ಬಸವರಾಜ ಅಂಜುಟಗಿ, ಡಿ.ಎಚ್. ಪೂಜಾರ, ನಂದಿಗೌಡ್ರ, ಎಫ್.ಯು. ಖಾಜಿ, ಲೋಕೇಶ ಲಮಾಣಿ, ಗುಡ್ಡಪ್ಪ ಹಳ್ಳೂರು, ರಾಜು ಗೊದೇರ, ಸತೀಶ ಮಾರಕಟ್ಟೆ, ಮಾರುತಿ ಹಾಲಭಾವಿ, ಹಿದಾಯತ್ ದೊಡ್ಡಮುಲ್ಲಾ, ವೀರನಗೌಡ ಹನುಮಂತಪ್ಪ, ಅಶೋಕ ರ್ಬಾ, ಬೀರಪ್ಪ ಬೆಳಕೇರಿ ಇತರರಿದ್ದರು.