ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಮನೆಗಳ್ಳತನ ಆರೋಪಿಗಳನ್ನು ಬಂಧಿಸಿರುವುದು. 
ಜಿಲ್ಲೆ

ಅಂತರ್ ಜಿಲ್ಲಾ ಮೂವರು ಮನೆಗಳ್ಳರ ಬಂಧನ

ನವೀನ ಬಿ.ಎಂ

ಶಿವಮೊಗ್ಗ: ಭದ್ರಾವತಿ ತಾಲೂಕಿನ ಹೊಸಸಿದ್ದಾಪುರ ಗ್ರಾಮದಲ್ಲಿ ಎರಡು ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಪೊಲೀಸರು, 1.95 ಲಕ್ಷ ರೂ. ಮೌಲ್ಯದ 39 ಗ್ರಾಂ ಬಂಗಾರ ಮತ್ತು 17 ಗ್ರಾಂ ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗಂಜಿಗೆರೆ ಗ್ರಾಮದ ಲೋಕೇಶ್ (50), ರಂಗನಾಥ್ (45) ಮತ್ತು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೋಡಿನಾಗೇನಹಳ್ಳಿಯ ವಿಜಯ್ (33) ಬಂಧಿತರು. ಮೂವರು ಮೇ 30ರಂದು ಭದ್ರಾವತಿ ತಾಲೂಕಿನ ಹೊಸಸಿದ್ದಾಪುರದ ಎರಡು ಮನೆಗಳ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದರು. ಈ ಬಗ್ಗೆ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಭದ್ರಾವತಿ ಉಪ ವಿಭಾಗದ ಎಎಸ್ಪಿ ಜಿತೇಂದ್ರಕುಮಾರ್ ದಯಾಮ ಅವರ ಮೇಲ್ವಿಚಾರಣೆಯಲ್ಲಿ ಹಳೇನಗರ ಠಾಣೆ ಪಿಎಸ್‌ಐ ಶರಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ನ್ಯೂಟೌನ್ ಠಾಣೆಯ ಎಎಸ್‌ಐಗಳಾದ ವೆಂಕಟೇಶ್, ಟಿ.ಪಿ.ಮಂಜಪ್ಪ, ಠಾಣಾ ಸಿಬ್ಬಂದಿ ರಂಗನಾಥ್, ತೀರ್ಥಲಿಂಗಪ್ಪ, ಪ್ರವೀಣಕುಮಾರ್, ಸುನೀಲ್ ಪಾಲ್ಗೊಂಡಿದ್ದರು.