ಮಾಗಡಿ
ತಾಲೂಕಿನ ಬಾಳೇನಹಳ್ಳಿಯಲ್ಲಿ ವೃದ್ಧೆ ಸರ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿಗಳಾದ ಕೆ.ಪಿ.ಮಾರುತಿ (30), ಅರಸೀಕೆರೆಯ ಸುಹೇಬ್ (26) ಬಂಧಿತರು
.
ಬಾಳೇನಹಳ್ಳಿಯ ವೃದ್ಧೆ ಗೌರಮ್ಮ ಆಗಸ್ಟ್ 21ರಂದು ಮೊಮ್ಮಗಳ ಶಾಲಾ ಶುಲ್ಕ ಕಟ್ಟಲು ತೆರಳುವ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿ, ಬಂಧಿಸಿದ್ದು, ಸರವನ್ನು ಗೌರಮ್ಮ ಅವರಿಗೆ ವಾಪಸ್ ನೀಡಿದ್ದಾರೆ.
ಬಂಧನದಿಂದ 2 ಸರಗಳ್ಳತನ, 3 ದ್ವಿಚಕ್ರ ವಾಹನ ಕಳ್ಳತನ ಸೇರಿ ಒಟ್ಟು 5 ಪ್ರಕರಣ ಪತ್ತೆಯಾಗಿವೆ. 60 ಗ್ರಾಂ ಹಾಗೂ 15 ಗ್ರಾಂ ಚಿನ್ನದ ಸರ, 3 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಅಂತೆಯೇ, ಮಾಗಡಿ ಠಾಣೆಯ 2 ಸರಗಳ್ಳತನ, ತಿಪ್ಪಟೂರು ಠಾಣೆಯ 1 , ಡಿ.ಜೆ.ಹಳ್ಳಿ ಠಾಣೆಯ 1, ನಂದಿನಿ ಲೇಔಟ್ ಠಾಣೆಯ 1 ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ ಕಾರ್ತಿಕ್ ರೆಡ್ಡಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ವಿ.ಸುರೇಶ್, ಎನ್.ಎಚ್.ರಾಮಚಂದ್ರಯ್ಯ, ಡಿವೈಎಸ್ಪಿ ಎಂ.ಪ್ರವಿಣ್, ಇನ್ಸ್ಪೆಕ್ಟರ್ ಜಿ.ವೈ.ಗಿರಿರಾಜು, ಸಿಬ್ಬಂದಿ ಬೀರಪ್ಪ, ಮುನೀಂದ್ರ, ಸಿದ್ದರಾಮೇಶ, ಸಿದ್ದರಾಜು ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.