ಜಿಲ್ಲೆ

ಕಲ್ಪಿತ ಕಾರ್ಯಾಚರಣೆ-ಬಂದರುಗಳಿಗೆ ಬಾಂಬ್‌ ಇಡಲು ಬಂದಿದ್ದ ಆಗಂತುಕರ ಬಂಧನ

ಕಾರವಾರ/ಗೋಕರ್ಣ: ಇನ್ನು ಸ್ವಲ್ಪ ವಿಳಂಬವಾಗಿದ್ದರೂ ಉತ್ತರ ಕನ್ನಡದ ಎರಡು ಪ್ರಮುಖ ಬಂದರುಗಳಲ್ಲಿ ಬಾಂಬ್‌ ಇಡಲಾಗುತ್ತಿತ್ತು. ಕರಾವಳಿ ಕಾವಲುಪಡೆ ಚುರುಕು ಕಾರ್ಯಾಚರಣೆ ನಡೆಸಿ ಅದನ್ನು ತಡೆದಿದೆ.

ಕಾರವಾರ ಹಾಗೂ ತದಡಿ ಬಂದರಿನಲ್ಲಿ 18 ಆಗಂತುಕರನ್ನು ಬಂಧಿಸಿ, ಅವರ ಬಳಿ ಇದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಭಯ ಪಡಬೇಕಿಲ್ಲ. ಇದು, ನಿಜವಾದ ಸುದ್ದಿಯಲ್ಲ. ಕರಾವಳಿಯ ರಕ್ಷಣಾ ಇಲಾಖೆಗಳು ಸೇರಿ ಗುರುವಾರ ನಡೆಸಿದ ಕಲ್ಪಿತ ಕಾರ್ಯಾಚರಣೆ.

ಕರಾವಳಿ ರಕ್ಷಾ ಕವಚ ಎಂಬ ಎರಡು ದಿನಗಳ ಕಲ್ಪಿತ ಕಾರ್ಯಾಚರಣೆಗೆ ಗುರುವಾರ ಚಾಲನೆ ದೊರಕಿದ್ದು, ಎಲ್ಲೆಡೆ ಭದ್ರತೆ ಕಲ್ಪಿಸಲಾಗಿದೆ. ಕಾರವಾರ ವಾಣಿಜ್ಯ ಬಂದರಿನ ಮೇಲೆ ದಾಳಿ ಮಾಡಲು ಆಗಮಿಸಿದ್ದ 8 ಜನ ಶಂಕಿತರನ್ನು ಅರಬ್ಬಿ ಸಮುದ್ರದಲ್ಲಿ ಸಿಎಸ್‌ಪಿ ಅಧಿಕಾರಿಗಳು ಇನ್ಸ್ಪೆಕ್ಟರ್ ನಿಶ್ಚಲಕುಮಾರ್ ನೇತೃತ್ವದಲ್ಲಿ ಬಂಧಿಸಿದ್ದಾರೆ.

ತದಡಿಯಲ್ಲಿ 10 ಜನರ ಬಂಧನ

ತದಡಿ ಬಂದರಿನಲ್ಲಿ ಕರಾವಳಿ ಕಾವಲು ಪಡೆ ಪೊಲೀಸರು ಬೆಳಗಿನ ಜಾವದಲ್ಲಿ ನಕಲಿ ಭಯೋತ್ಪಾದಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಬೋಟ್ ಮೂಲಕ ಬಂದ ಈ 10 ಜನರ ರೆಡ್-ಸ್ಕ್ಯಾಡ್‌ ತಂಡದ ಬಳಿಯಿದ್ದ ಹುಸಿ ಬಾಂಬ್‌ನ್ನು ಈ ವೇಳೆ ವಶ ಪಡಿಸಿಕೊಳ್ಳಲಾಯಿತು.ಈ ತಂಡದಲ್ಲಿ ಪೊಲೀಸ್ ಸಿಬ್ಬಂದಿ ಸೇರಿ ನೌಕಾದಳದವರು ಸಹ ಪಾಲ್ಗೊಂಡಿದ್ದಾರೆ.ಕುಮಟಾ ಕರಾವಳಿ ಕಾವಲು ಪಡೆಯ ಸಿಪಿಐ ವಿಕ್ಟರ್ ಸೈಮನ್,ಪಿಎಸ್‌ಐ ಅನುಪ್ ನಾಯಕ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾವಲು ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಇದ್ದರು.

ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸ್ಥಳೀಯ ಸಿಪಿಐ ವಸಂತ ಆಚಾರ್ಯ,ಪಿಎಸ್‌ಐ ರವೀಂದ್ರ ಬಿರಾದರ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಇಲ್ಲಿನ ಮುಖ್ಯ ಮಂದಿರ ಪರಿಸರ,ಸಮುದ್ರ ತೀರಗಳು,ಬಸ್ ಮತ್ತು ರೈಲ್ವೆ ನಿಲ್ದಾಣ ಹಾಗೂ ಎಲ್ಲ ಪ್ರಮುಖ ಸ್ಥಳಗಳಲ್ಲಿ ಪೊಲೀಸರಿಂದ ಕಟ್ಟುನಿಟ್ಟಾದ ತಪಾಸಣೆ ನಡೆಯುತ್ತಿದೆ.

ವಿಚ್ಛಿಧ್ರಕಾರಿ ಶಕ್ತಿಗಳನ್ನು ತಡೆಯಲು ಕರಾವಳಿಯ ರಕ್ಷಣಾ ತಂಡಗಳ ನಡುವೆ ಪರಸ್ಪರ ಸಮನ್ವಯ ಸಾಧಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗುತ್ತದೆ. ನೌಕಾನೆಲೆಯ ಅಽಕಾರಿಗಳು ಭಯೋತ್ಪಾದಕರ ಮಾರು ವೇಷದಲ್ಲಿ ಸೂಕ್ಷ್ಮ ಸ್ಥಳಗಳ ಮೇಲೆ ದಾಳಿ ಮಾಡುತ್ತಾರೆ. ರಾಜ್ಯ ಪೊಲೀಸ್, ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್, ಭಾರತೀಯ ನೌಕಾಸೇನೆ ಮುಂತಾದ ರಕ್ಷಣಾ ತಂಡಗಳು ಜಂಟಿಯಾಗಿ ಕಾರ್ಯಾಚರಿಸಿ ಅವರನ್ನು ಹಿಡಿಯಬೇಕಿದೆ. ನ.17 ರ ಸಾಯಂಕಾಲ 6 ಗಂಟೆಯವರೆಗೆ ಕಾರ್ಯಾಚರಣೆ ನಡೆಯಲಿದೆ.