ಜಿಲ್ಲೆ

ಕಳ್ಳನ ಬಂಧನ, 6 ಬೈಕ್ ವಶ

Haveri

ರಾಣೆಬೆನ್ನೂರ: ನಗರದಲ್ಲಿ ಬೈಕ್ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿದ ಇಲ್ಲಿಯ ಶಹರ ಠಾಣೆ ಪೊಲೀಸರು, 3.50 ಲಕ್ಷ ರೂ. ಮೌಲ್ಯದ 6 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ನಿವಾಸಿ ಷಣ್ಮುಖ ಕೆ.ಜಿ. ಮರಳಸಿದ್ದಪ್ಪ (40) ಬಂಧಿತ ಆರೋಪಿ.

ಈತ ನಗರದಲ್ಲಿ 2, ದಾವಣಗೆರೆಯಲ್ಲಿ 2 ಹಾಗೂ ಹರಿಹರದಲ್ಲಿ 2 ಸೇರಿ ಒಟ್ಟು 6 ಬೈಕ್​ಗಳನ್ನು ಕಳವು ಮಾಡಿದ್ದ. ಈ ಕುರಿತು ಶಹರ ಠಾಣೆ ಪೊಲೀಸರು ಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಡಿವೈಎಸ್ಪಿ ಟಿ.ವಿ. ಸುರೇಶ, ಸಿಪಿಐ ಎಂ.ಐ. ಗೌಡಪ್ಪಗೌಡ್ರ, ಪಿಎಸ್​ಐ ಪ್ರಭು ಕೆಳಗಿನಮನಿ, ಎಎಸ್​ಐ ಎಚ್.ಎನ್. ದೊಡ್ಡಮನಿ ಹಾಗೂ ಸಿಬ್ಬಂದಿಯಾದ ಕೆ.ಎಚ್. ಸವೂರ, ಎಚ್.ಎಲ್. ದನುವಿನಮನಿ, ಪಿ.ಕೆ. ಸನದಿ, ಮಂಜುನಾಥ ಕುಂಟಗೌಡ್ರ, ವಿಠಲ್ ಡಿ.ಬಿ., ಸಚೀನ ಓಲೇಕಾರ, ಮಂಜುನಾಥ ಕೆಂಗೊಂಡ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು.