ಮಂಡ್ಯ: ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಗಳ್ಳತನ ಮಾಡಿದ್ದ ಇಬ್ಬರು ಹಾಗೂ ಮನೆ ಬೀಗ ಮುರಿದು ಕಳ್ಳತನವೆಸಗಿದ್ದ ಒರ್ವನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಅಂತೆಯೇ 465 ಗ್ರಾಂ ಚಿನ್ನಾಭರಣ, ಎರಡು ಕೆ.ಜಿ ಬೆಳ್ಳಿ ಪದಾರ್ಥ, ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, 2025 ಫೆ.9ರಂದು ಮದ್ದೂರಿನ ಪರಮೇಶ್ ಎಂಬುವರು ತಮ್ಮ ಪತ್ನಿಯೊಂದಿಗೆ ಬೈಕ್‌ನಲ್ಲಿ ಮುಡುಕತೊರೆ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಂತೆಯೇ ಮಳವಳ್ಳಿ ಮತ್ತು ಮುಟ್ಟನಹಳ್ಳಿ ರಸ್ತೆಯ ಕೋಣಕೊಪ್ಪಲು ಸಮೀಪ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪರಮೇಶ್ ಅವರ ಪತ್ನಿಯ ಕುತ್ತಿಗೆಯಲ್ಲಿ ಎರಡು ಎಳೆಯ ಮಾಂಗಲ್ಯ ಸರ, ಶಾರ್ಟ್ ನೆಕ್ಲೇಸ್‌ನ ಸ್ವಲ್ಪಭಾಗವನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಚಿನ್ನಾಭರಣದ ಮೊತ್ತ 3,20 ಲಕ್ಷ ರೂ ಆಗಿತ್ತು. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಅದರಂತೆ ಪೊಲೀಸರು ತನಿಖೆ ಆರಂಭಿಸಿದರು ಎಂದರು.
ಅದರಂತೆ ಮೂಲತಃ ಮಂಡ್ಯ ತಾಲೂಕು ಹೊಳಲು ಗ್ರಾಮದ ಹಾಲಿ ವಾಸ ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣದ ಶೃಂಗಾರ್(25) ಹಾಗೂ ಕನ್ನಲಿ ಗ್ರಾಮದ ಎಸ್.ಚೇತನ್(25) ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು. ಈ ವೇಳೆ ಬೆಳಕವಾಡಿ, ಲಕ್ಷ್ಮೀಪುರಂ, ಆಲನಹಳ್ಳ, ವರುಣಾ, ಕುವೆಂಪುನಗರ, ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಒಂದು ಹಾಗೂ ನಜರ್‌ಬಾದ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣ ಬೆಳಕಿಗೆ ಬಂದಿದೆ. ಈ ಎಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 286 ಗ್ರಾಂ ತೂಕದ ಚಿನ್ನದ ಒಡವೆ, ಕೃತ್ಯಕ್ಕೆ ಉಪಯೋಗಿಸಿದ್ದ ಬೆಂಗಳೂರಿನಲ್ಲಿ ಕಳ್ಳತನ ಮಾಡಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಇವುಗಳು ಒಟ್ಟು ಮೌಲ್ಯ 24,20,200 ರೂಗಳಾಗಿದೆ. ಇನ್ನು ಬಂಧಿತ ಶೃಂಗಾರ್ ಸಾಹಸ ಕಲಾವಿದನಾಗಿದ್ದು, ಒಂದು ಚಿತ್ರದಲ್ಲಿ ನಟನೆ ಮಾಡಿದ್ದಾನೆಂದು ತಿಳಿದುಬಂದಿದೆ ಎಂದು ವಿವರಿಸಿದರು.
ತನಿಖಾ ತಂಡದಲ್ಲಿದ್ದ ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಪಿಎಸ್‌ಐಗಳಾದ ಡಿ.ರವಿಕುಮಾರ್, ಬಿ.ವಿ.ಪ್ರಕಾಶ್, ಸಿಬ್ಬಂದಿ ರಿಯಾಜ್ ಪಾಷಾ, ಪ್ರಭುಸ್ವಾಮಿ, ಎಂ.ಕೆ.ನಾಗೇಂದ್ರ, ಕೃಷ್ಣಮೂರ್ತಿ, ಜಯಕುಮಾರ್, ಉಮೇಶ್, ಸಿದ್ದರಾಜು, ಶ್ರೀನಿವಾಸ್, ಮಧುಕಿರಣ್, ಎನ್.ಸಿ.ಶಿವಕುಮಾರ್, ಮಂಡ್ಯ ಸಿಡಿಆರ್ ವಿಭಾಗದ ರವಿಕಿರಣ್, ಲೋಕೇಶ್, ಚಾಲಕರಾದ ಪ್ರೀತಿಕುಮಾರ್, ಮಹದೇವಸ್ವಾಮಿ ಅವರನ್ನು ಜಿಲ್ಲಾ ಎಸ್ಪಿ ಅಭಿನಂದಿಸಿದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಇ.ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ಇತರರಿದ್ದರು.
ಮನೆಗಳ್ಳತನ ಮಾಡುತ್ತಿದ್ದವನ ಬಂಧನ
ಮಳವಳ್ಳಿ ತಾಲೂಕು ಅಗಸನಪುರ ಗ್ರಾಮದಲ್ಲಿ 2024 ಆ.22ರಂದು ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ 17,92,800 ರೂ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥ ವಶಕ್ಕೆ ಪಡೆಯಲಾಗಿದೆ.
ಅಗಸನಪುರ ಗ್ರಾಮದ ಚಿಕ್ಕಬಸವಣ್ಣ ಎಂಬುವರ ಮನೆ ಬೀಗ ಮುರಿದು 45 ಗ್ರಾಂ ಚಿನ್ನ, ಐದು ಕೆ.ಜಿ 403 ಗ್ರಾಂ ಬೆಳ್ಳಿ, 35 ಸಾವಿರ ರೂ ನಗದು ದೋಚಿ ಪರಾರಿಯಾಗಿದ್ದ ಪ್ರಕರಣ ನಡೆದಿತ್ತು. ಈ ಸಂಬಂಧ ಹಲಗೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ರಾಮನಗರ ಜಿಲ್ಲೆ ಚನ್ನಪಟ್ಟಣದ ತಾಲೂಕು ಬೈರಾಪಟ್ಟಣ ಗ್ರಾಮದ ಕೆ.ಪ್ರಸನ್ನ(40) ಎಂಬಾತನನ್ನು ಬಂಧಿಸಿದ್ದಾರೆ. ನಂತರ ವಿಚಾರಣೆಗೊಳಪಡಿಸಿದಾಗ ಈತನ ವಿರುದ್ದ ಹಲಗೂರು ಠಾಣೆಯಲ್ಲಿ ನಾಲ್ಕು, ಬೆಳಕವಾಡಿಯಲ್ಲಿ ಮೂರು, ಮಳವಳ್ಳಿ ಗ್ರಾಮಾಂತರ ಮತ್ತು ಕಿರುಗಾವಲು ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿತ್ತು ಎಂದು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ವಿವರಿಸಿದರು.
ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿದ್ದ ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಪಿಎಸ್‌ಐಗಳಾದ ಡಿ.ರವಿಕುಮಾರ್, ಲೋಕೇಶ್, ಸಿಬ್ಬಂದಿ ರಿಯಾಜ್ ಪಾಷಾ, ಪ್ರಭುಸ್ವಾಮಿ, ಎಂ.ಕೆ.ನಾಗೇಂದ್ರ, ಕೃಷ್ಣಮೂರ್ತಿ, ಜಯಕುಮಾರ್, ಸಿದ್ದರಾಜು, ಶ್ರೀನಿವಾಸ್, ಮಧುಕಿರಣ್, ಶಿವಕಮಾರ್, ಮಂಡ್ಯ ಸಿಡಿಆರ್ ವಿಭಾಗದ ರವಿಕಿರಣ್, ಲೋಕೇಶ್, ಚಾಲಕರಾದ ಪ್ರೀತಿಕುಮಾರ್, ಮಹದೇವಸ್ವಾಮಿ ಅವರನ್ನು ಜಿಲ್ಲಾ ಎಸ್ಪಿ ಅಭಿನಂದಿಸಿದರು.