ಜಿಲ್ಲೆ

ನಾಡ ಬಂದೂಕು ತಯಾರಿಸುತ್ತಿದ್ದವನ ಬಂಧನ

ಹನೂರು : ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀರೆಪಾತಿ ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಇಟ್ಟುಕೊಂಡಿದ್ದ ಆರೋಪಿಯನ್ನು ಶನಿವಾರ ರಾತ್ರಿ ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಸಂದನಪಾಳ್ಯ ಗ್ರಾಮದ ಮಹಿಮೈನಾಥನ್ ಆಲಿಯಾಸ್ ಮೀಸೆ ರಾಜು ಬಂಧಿತ ಆರೋಪಿ. ಈತ ಸಮೀಪದ ಕೀರೆಪಾತಿ ಗ್ರಾಮದಲ್ಲಿ ಜಮೀನನ್ನು ಹೊಂದಿದು, ಇಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾನೂನು ಸುವ್ಯವಸ್ಥೆಯ ಸಬ್ ಇನ್‌ಸ್ಪೆಕಟರ್ ಈಶ್ವರ್ ಹಾಗೂ ಸಿಬ್ಬಂದಿ ರಾತ್ರಿ 7.45ರಲ್ಲಿ ದಾಳಿ ನಡೆಸಿದಾಗ ನಾಡ ಬಂದೂಕು ತಯಾರಿಸುವುದು ದೃಢಪಟ್ಟಿದೆ. ಬಳಿಕ ಆರೋಪಿಯನ್ನು ಬಂಧಿಸಿದ ಪೊಲಿಸರು 2 ಒಂಟಿ ನಳಿಕೆ ನಾಡ ಬಂದೂಕು, ತಯಾರಿಕೆಯ ವಿವಿಧ ಪರಿಕರಗಳು ಹಾಗೂ ಪರವಾನಗೆ ಇರುವ ಒಂದು ಒಂಟಿ ನಳಿಕೆ ನಾಡ ಬಂದೂಕನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.