ಬಂಗಾರಪೇಟೆ: ಹಣದಾಸೆಗಾಗಿ ಅಪ್ರಾಪ್ತ ನಾಲ್ವರು ಬಾಲಕರನ್ನು ಲಾಡ್ಜ್ ಒಂದರಲ್ಲಿ ಕೂಡಿ ಹಾಕಿದ್ದ ವ್ಯಕ್ತಿಯೊರ್ವನನ್ನು ಬಂಗಾರಪೇಟೆ ಪೊಲೀಸರು ಮಂಗಳವಾರ ಬಂಧಿಸಿ, ಬಾಲಕರನ್ನು ಪಾಲಕರಿಗೆ ಒಪ್ಪಿಸಿದ್ದಾರೆ. ರಾಯಚೂರು ಮೂಲದ ಜ್ಯೋತಿಷಿ ಎನ್ನಲಾದ ವಿಷ್ಣುರಾವ್ (38) ಬಂಧಿತ. ಬಾಲಕರು 14 ರಿಂದ 16 ವರ್ಷದವರು.
ಘಟನೆ ವಿವರ: ಡಿ.22 ರಂದು ಮನೆಯ ಮುಂಭಾಗ ಆಟವಾಡುತ್ತಿದ್ದಾಗ ಬಾಲಕರು ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚಿಕೊಡುವಂತೆ ಪಾಲಕರು ಬಂಗಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಆರಕ್ಷಕ ನಿರೀಕ್ಷಕ ದಯಾನಂದ್ ಮತ್ತು ಸಿಬ್ಬಂದಿ ವಿಶೇಷ ತಂಡ ರಚಿಸಿ ಪೋಲೀಸರು ಮಕ್ಕಳ ಹುಡುಕಾಟ ನಡೆಸಿದರು. ಈ ವೇಳೆ ರಾಯಚೂರು ಮೂಲದ ಜ್ಯೋತಿಷಿ ವಿಷ್ಣುರಾವ್ನನ್ನು ವಶಕ್ಕೆ ಪಡೆದು, ವಿಚಾರಿಸಿದಾಗ ಘಟನೆಯ ವಿವರ ತಿಳಿದುಬಂದಿದೆ. ನಾಲ್ವರು ಅಪ್ರಾಪ್ತ ಬಾಲಕರು ಬೆಂಗಳೂರಿನ ತ್ರಿವೇಣಿ ಚಿತ್ರ ಮಂದಿರಕ್ಕೆ ಪುಷ್ಪ-2 ಚಿತ್ರವನ್ನು ನೋಡಲು ಹೋಗಿದ್ದರು. ಅಲ್ಲಿ ಈ ಬಾಲಕರಿಗೆ ವಿಷ್ಣುರಾವ್ನ ಪರಿಚಯವಾಗಿದೆ. ಚಿತ್ರ ಮಂದಿರದಿಂದ ಬಾಲಕರನ್ನು ಕರೆದುಕೊಂಡು ಹೋದ ಜ್ಯೋತಿಷಿ "ನಿಮ್ಮ ಸಮಯ ಸರಿ ಇಲ್ಲ ನಿಮಗೆ ಮಾಟ, ಮಂತ್ರ ಮಾಡಿ ಎಲ್ಲವನ್ನೂ ಸರಿ ಮಾಡುತ್ತೇನೆ' ಎಂದು ನಂಬಿಸಿ ಕುಂಕುಮ, ನಿಂಬೆ ಹಣ್ಣು, ಮೂಳೆ ಮತ್ತು ಗೊಂಬೆಗಳನ್ನು ನೀಡಿದ್ದಲ್ಲದೆ ಅವರಲ್ಲಿ ಇದ್ದ ಎಲ್ಲ ಹಣವನ್ನೂ ಕಿತ್ತುಕೊಂಡಿದ್ದಾನೆ. ನಂತರ ಬಾಲಕರು ಆಚೆ ಹೋಗದಂತೆ ಲಾಡ್ಜ್ ಒಂದರಲ್ಲಿ ಕೂಡಿ ಹಾಕಿದ್ದಾನೆ. ಆರೋಪಿ ನೀಡಿದ ಮಾಹಿತಿಯ ಮೇರೆಗೆ ಬಾಲಕರನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು
ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ಭೇದಿಸಿದ ಪೋಲೀಸರ ತಂಡವನ್ನು ಎಸ್ಪಿ ಶಾಂತರಾಜು ಮತ್ತು ಡಿವೈಎಸ್ಪಿ ಪಾಂಡುರಂಗ ಪ್ರಶಂಶಿಸಿದ್ದಾರೆ.