ಜಿಲ್ಲೆ

ಕೆಲಸ ಕೊಡಿಸುವುದಾಗಿ ವಂಚಿಸಿದ್ದವನ ಬಂಧನ

ಕೊಳ್ಳೇಗಾಲ: ಸರ್ಕಾರಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚಿಸಿದ್ದ ವ್ಯಕ್ತಿಯನ್ನು ಪಟ್ಟಣ ಪೊಲೀಸರು ಮಂಗಳವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರಿನ ವಿಜಯನಗರದ ಮೂಲದ ಪ್ರಭಾಕರ್ (37) ಬಂಧಿತ. ಈತ ಪಟ್ಟಣದ ನಾಯಕರ ದೊಡ್ಡ ಬೀದಿಯ ಶ್ರೀನಿವಾಸ್ ಎಂಬುವವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ. ಈ ಸಂಬಂಧ 2020ರಲ್ಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದರು. ಆರೋಪಿ ಎಸ್ಸೆಸ್ಸೆಲ್ಸಿ ಬೋರ್ಡ್‌ನಲ್ಲಿ ಡಿ ಗ್ರೂಪ್ ನೌಕರಿ ಕೊಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದು ಮೋಸ ಮಾಡಿದ್ದನು ಎನ್ನಲಾಗಿದೆ.
ಪ್ರಭಾಕರ್ ವಿರುದ್ಧ ಮಂಗಳೂರು ಹಾಗೂ ಮೈಸೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲಸ ಕೊಡಿಸುವುದಾಗಿ ಇದೇ ರೀತಿ 15 ಜನರನ್ನು ವಂಚಿಸಿ ಲಕ್ಷಾಂತರ ರೂ. ಪಡೆದಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಪ್ರಕರಣದ ತನಿಖಾಧಿಕಾರಿ ಕೊಳ್ಳೇಗಾಲ ವೃತ್ತ ನಿರೀಕ್ಷಕ ಕೃಷ್ಣಪ್ಪ ಮತ್ತು ತಂಡ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್‌ಐ ಮಹೇಶ್‌ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಸಿದ್ದರು.