ಆನೆಯ ಎರಡು ದಂತಗಳನ್ನು ಕಳವು ಮಾಡಿದ್ದ ಕೋಣನ ಕರಿಯ ಹಾಗೂ ಸಿದ್ದರಾಜು ಅವರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು.  
ಜಿಲ್ಲೆ

ಆನೆಯ ಎರಡು ದಂತ ಕಳವು ಮಾಡಿದ್ದ ಆರೋಪಿಗಳ ಬಂಧನ

ಹಲಗೂರು: ಕಾವೇರಿ ವನ್ಯಜೀವಿ ಧಾಮದ ಹಲಗೂರು ವಲಯದ ಅರಣ್ಯ ಪ್ರದೇಶದಲ್ಲಿ ಆನೆಯ ಎರಡು ದಂತಗಳನ್ನು ಕಳವು ಮಾಡಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಬಂಧಿಸಿದ್ದಾರೆ.


ಮುತ್ತತ್ತಿ ಗ್ರಾಮದ ಕೋಣನ ಕರಿಯ ಹಾಗೂ ಸಿದ್ದರಾಜು ಬಂಧಿತ ಆರೋಪಿಗಳು.


ಶಿಂಷಾ ಗಸ್ತಿನ ಮರಚಲುಕಡ ಅರಣ್ಯ ಪ್ರದೇಶದ ಶಿಂಷಾ ನದಿ ಬಳಿ 20ರಿಂದ 21 ವರ್ಷ ವಯಸ್ಸಿನ ಆನೆ ಸ್ವಾಭಾವಿಕವಾಗಿ ಮೃತಪಟ್ಟಿತ್ತು. ಈ ವೇಳೆ ಆನೆಯ ಎರಡೂ ದಂತಗಳು ಕಳವಾಗಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದರು.


ನಂತರ ಕನಕಪುರ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ನಾಗೇಂದ್ರಪ್ರಸಾದ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರವಿ ಬುರ್ಜಿ ಹಾಗೂ ಅರಣ್ಯ ಸಿಬ್ಬಂದಿ ತನಿಖೆ ಕೈಗೊಂಡಿದ್ದರು. ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಕೋಣನ ಕರಿಯ ಹಾಗೂ ಸಿದ್ದರಾಜು ಅವರನ್ನು ವಿಚಾರಣೆಗೆ ಒಳಪಡಿಸಿದರು. ಶಿಂಷಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಸಂದರ್ಭ ಹತ್ತಿರದಲ್ಲೇ ಆನೆ ಮೃತಪಟ್ಟಿತ್ತು.

ಎರಡು ದಂತಗಳನ್ನು ತೆಗೆದು ಅರಣ್ಯದಲ್ಲಿ ಬಚ್ಚಿಟ್ಟಿರುವುದಾಗಿ ತನಿಖೆಯ ವೇಳೆ ಆರೋಪಿಗಳು ಒಪ್ಪಿಕೊಂಡರು. ಬಳಿಕ ಸ್ಥಳ ಪರಿಶೀಲನೆ ನಡೆಸಿ, ದಂತಗಳ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ವನ್ಯಜೀವಿ ರಕ್ಷಣೆ ಕಾಯ್ದೆ 1972ರಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ಹಲಗೂರು ವಲಯ ಅರಣ್ಯಾಧಿಕಾರಿ ರವಿ ಬುರ್ಜಿ, ಕನಕಪುರ ವಿಭಾಗದ ಅರಣ್ಯ ಅಧಿಕಾರಿ ದೇವರಾಜು, ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರವೀಣ್‌ಕುಮಾರ್, ಕುಮಾರಸ್ವಾಮಿ, ಗಸ್ತು ಅರಣ್ಯಾಧಿಕಾರಿಗಳಾದ ಮಲ್ಲಿಕಾರ್ಜುನ್, ಪ್ರಕಾಶ್, ಸಿದ್ದರಾಮ ಪೂಜಾರಿ, ಪ್ರಕಾಶ್, ಶಿವರಾಜ್, ಮೌನೇಶ್, ಜಯರಾಮ್, ರಾಮಪ್ಪ, ಚೇತನ್, ಕಿರಣ್, ಮಂಜು ಇತರರು ಕಾರ್ಯಾಚರಣೆಯಲ್ಲಿದ್ದರು.