ಜಿಲ್ಲೆ

ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದವನ ಬಂಧನ

ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಲಾಖೆಯ ನೌಕರನೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ನೈಋತ್ಯ ರೈಲ್ವೆಯ ಮುಖ್ಯ ಕಚೇರಿಯ ಆರ್ಥಿಕ ವಿಭಾಗದಲ್ಲಿ ಗುಮಾಸ್ತನಾಗಿರುವ ನದೀಮ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ತನಗೆ ರೈಲ್ವೆ ರಿಕ್ರೂಂಟ್‌ಮೆಂಟ್ ಸೆಲ್‌ನಲ್ಲಿ ಪರಿಚಿತರಿದ್ದಾರೆ. ಕೆಲಸ ಕೊಡಿಸುವೆ. ಅದಕ್ಕಾಗಿ ಹಣ ಕೊಡುವಂತೆ ಹೇಳಿದ್ದಾನೆ. ಕೊಡಲು ಆಗದಿದ್ದರೆ ನಮ್ಮ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದು ಹೇಳಿ, ರೈಲ್ವೆ ಗೆಸ್ಟ್ ಹೌಸ್‌ನ ರೂಮ್‌ಗೆ ಕರೆದಿದ್ದಾನೆ. ಮಹಿಳೆಯು ಸಂಶಯಗೊಂಡು ತನ್ನ ಕುಟುಂಬಸ್ಥರಿಗೆ ಈ ಮಾಹಿತಿ ನೀಡಿದಾಗ ಕೇಶ್ವಾಪುರ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ. ಗೃಹಿಣಿಯನ್ನು ಗೆಸ್ಟ್ ಹೌಸ್‌ಗೆ ಕಳುಹಿಸಿದ ಪೊಲೀಸರು, ಅಲ್ಲಿಯೇ ಇದ್ದ ನಂದೀಂನನ್ನು ಬಂಧಿಸಿ, ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆದಿದ್ದಾರೆ.
ಐಎಎಸ್ ಅಧಿಕಾರಿ ಹೆಸರಿನಲ್ಲಿ ನದೀಂ ರೂಮ್ ಬುಕ್ ಮಾಡಿದ್ದ. ಕೊಠಡಿ ಬಾಗಿಲಿಗೆ ವೆಲ್‌ಕಮ್, ಯುವರ್ ಲೈಫ್ ಚೇಂಜಿಂಗ್ ರೆನ್, ಆಜ್‌ಕೆ ಬಾದ್ ಆಪ್ಕಾ ಲೆವೆಲ್ ಚೇಂಜ್ ಓರಾಹೈ ಅಂತ ಬರೆದಿದ್ದು, ಇದು ಪೊಲೀಸರಿಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
‘ನೌಕರಿ ಕೊಡಿಸುವುದಾಗಿ ಎಷ್ಟು ಮಹಿಳೆಯರು ಹಾಗೂ ಜನರಿಗೆ ಮೋಸ ಮಾಡಿದ್ದಾನೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.