ಶ್ರೀರಂಗಪಟ್ಟಣ: ಚೂರಿಯಿಂದ ಮಹಿಳೆಯ ಕತ್ತು ಸೀಳಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದ ಕಾಂತರಾಜು (31) ಬಂಧಿತ ಆರೋಪಿ. ಈತ ಕೊಲೆಯಾದ ಮಹಿಳೆ ಪಾರ್ವತಮ್ಮ ಅವರ ಸ್ವಂತ ಮಗಳ ಗಂಡನೇ ಆಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆ ಅಳಿಯ ಕಾಂತರಾಜು ತನ್ನ ಅತ್ತೆ ವಿರುದ್ಧ ಅಸಮಾಧಾನಗೊಂಡು ಪಾರ್ವತಮ್ಮ ಅವರನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯ ಎಲೆಕೆರೆ ಗ್ರಾಮದ ಲೇ.ಸ್ವಾಮೀಗೌಡರ ಪತ್ನಿ ಕೊಲೆಯಾದ ಪಾರ್ವತಮ್ಮ(55) ತನ್ನ ಪುತ್ರಿ ಅರ್ಪಿತಾಳನ್ನು ಕಟ್ಟೇರಿ ಗ್ರಾಮದ ಕೃಷಿಕ ಕಾಂತರಾಜು ಅವರಿಗೆ ವಿವಾಹ ಮಾಡಿಕೊಟ್ಟಿದ್ದರು. ಆದರೆ ಗಂಡನೊಂದಿಗೆ ಹೊಂದಾಣಿಕೆ ಏರ್ಪಡದ ಕಾರಣ ಅರ್ಪಿತಾ ಜಗಳವಾಡಿಕೊಂಡು ತನ್ನ ತಾಯಿ ಪಾರ್ವತಮ್ಮ ಅವರೊಂದಿಗೆ ಎಲೆಕೆರೆ ಗ್ರಾಮದ ಮನೆಯಲ್ಲಿ ವಾಸವಿದ್ದಳು. ಸಾಕಷ್ಟು ಬಾರಿ ಮನೆಗೆ ಬರುವಂತೆ ತನ್ನ ಪಾಲಕರೊಂದಿಗೆ ತೆರಳಿ ಸಂಧಾನ ನಡೆಸಿದರೂ ಅರ್ಪಿತಾಳನ್ನು ಕಳುಹಿಸಲು ಆಕೆಯ ತಾಯಿ ಒಪ್ಪದ ಹಿನ್ನೆಲೆಯಲ್ಲಿ ಕಾಂತರಾಜು ಕುಪಿತಗೊಂಡಿದ್ದನು.
ಡಿ.11ರಂದು ತಡರಾತ್ರಿ ಕಾರ್ತಿಕ ಮಾಸದ ಕಡೆ ಸೋಮವಾರದ ಪ್ರಯುಕ್ತ ಪಾರ್ವತಮ್ಮ ತನ್ನ ಮಗಳು ಅರ್ಪಿತಾಳೊಂದಿಗೆ ವಿ.ಸಿ.ನಾಲೆ ಬಳಿ ತೆರಳಿ ಗಂಗೆ ಪೂಜಾ ಕಾರ್ಯ ಮುಗಿಸಿ ಮಧ್ಯರಾತ್ರಿ 1.30ರ ವೇಳೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಏಕಾಏಕಿ ವ್ಯಕ್ತಿಯೊಬ್ಬ ಚೂರಿಯಿಂದ ಪಾರ್ವತಮ್ಮ ಅವರ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪಾರ್ವತಮ್ಮ ಮೃತಪಟ್ಟಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಎನ್. ಯತೀಶ್, ಎಎಸ್ಪಿ ತಿಮ್ಮಯ್ಯ ಹಾಗೂ ಡಿವೈಎಸ್ಪಿ ಮುರಳಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಅದರಂತೆ ಆರೋಪಿ ಕಾಂತರಾಜುವನ್ನು ಬಂಧಿಸಿರುವ ಪೊಲೀಸರು, ಆತ ಕೃತ್ಯಕ್ಕೆ ಬಳಸಿದ್ದ ಚಾಕು ಹಾಗೂ ಬೈಕ್ ಸಮೇತ 24 ಗಂಟೆ ಒಳಗೆ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಕಾಂತರಾಜು ತನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಆತನನ್ನು ಬಂಧಿಖಾನೆಗೆ ಕಳುಹಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ರಕ್ಷಿತಾ, ಸಿಬ್ಬಂದಿ ಶ್ರೀನಿವಾಸ ಮೂರ್ತಿ, ಮುತ್ತುರಾಜು, ರೇವಯ್ಯ ಮತ್ತು ರವೀಂದ್ರ ಪಾಲ್ಗೊಂಡಿದ್ದರು.