ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ 
ಜಿಲ್ಲೆ

ರೌಡಿಶೀಟರ್ ಹತ್ಯೆ ಆರೋಪಿಗಳ ಬಂಧನ

ನವೀನ ಬಿ.ಎಂ

ಶಿವಮೊಗ್ಗ: ಭದ್ರಾವತಿ ತಾಲೂಕಿನ ಗೌಡ್ರಳ್ಳಿಯ ತೋಟವೊಂದರಲ್ಲಿ ಕೊಲೆಯಾದ ಶಿವಮೊಗ್ಗ ಟಿಪ್ಪುನಗರದ ರೌಡಿಶೀಟರ್ ಸೈಯದ್ ರಾಜಿಕ್ ಪ್ರಕರಣವನ್ನು ಭೇದಿಸಿರುವ ಪೊಲೀಸರು, ನಾಲ್ವರನ್ನು ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.

ಭದ್ರಾವತಿ ತಾಲೂಕಿನ ತಿಪ್ಪಾಪುರ ಕ್ಯಾಂಪ್ ಗ್ರಾಮದ ಸಮೀರ್, ಜಮೀರ್ ಅಲಿಯಾಸ್ ಸಮೀರ್, ನ್ಯಾಮತ್ ಅಲಿ ಮತ್ತು ಮಹಮ್ಮದ್ ಶಫಿವುಲಾ ಬಂಧಿತರು. ಕಳೆದ ಅ.20ರಂದು ರಾತ್ರಿ ಗೌಡ್ರಳ್ಳಿಯ ತೋಟದಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸೈಯದ್ ರಾಜಿಕ್‌ನನ್ನು ಎಂಟು ಮಂದಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದರು.
ಕೃತ್ಯದ ಬೆನ್ನಲ್ಲೇ ಸೈಯದ್ ರಾಜಿಕ್ ಸಹೋದರಿ ಗುಲ್ಮಾಜ್ ಬಾನು ನೀಡಿದ ದೂರಿನ ಮೇರೆಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಗಂಭೀರವಾದ ಪ್ರಕರಣದಲ್ಲಿ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಜಗದೀಶ್ ಸಿ ಹಂಚಿನಾಳ್, ನೇತೃತ್ವದಲ್ಲಿ ಪಿಎಸ್‌ಐ ಶ್ರೀಶೈಲ ಕೆಂಚಣ್ಣವರ, ಸಿಬ್ಬಂದಿಗಳಾದ ಮಂಜುನಾಥ, ಈರಯ್ಯ ಮತ್ತು ಶಿವಪ್ಪ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಎಂಟು ಮಂದಿ ಪೈಕಿ ನಾಲ್ವರನ್ನು ಮಹಾರಾಷ್ಟ್ರದ ಗಡಿಭಾಗದಲ್ಲಿ ಬಂಧಿಸಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.