ಗದಗ: ಜಿಲ್ಲೆಯ ರೋಣ ಪಟ್ಟಣದಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪುಬಟ್ಟೆ ಪ್ರದರ್ಶಿಸಿ ೇರಾವ್ ಹಾಕಲು ತೆರಳುತ್ತಿದ್ದ ಪಂಚಮಸಾಲಿ ಹೋರಾಟಗಾರರನ್ನು ಗದಗ ಮತ್ತು ರೋಣ ಪಟ್ಟಣದಲ್ಲಿ ವಶಕ್ಕೆ ಪಡೆದ ಪೊಲೀಸರು ಸಮಾವೇಶ ಮುಕ್ತಾಯವಾದ ಬಳಿಕ ಬಿಡುಗಡೆ ಮಾಡಿದ್ದಾರೆ.
ರೋಣ ತಾಲೂಕು ಕ್ರೀಡಾಂಗಣದಲ್ಲಿ 200 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದರು. ಈ ವೇಳೆ ಗದಗ ನಗರದಿಂದ ರೋಣಕ್ಕೆ ಪಂಚಮಸಾಲಿ ಹೋರಾಟಗಾರು ಹೊರಟಿದ್ದರು. 2ಎ ಮೀಸಲಾತಿ ಆಗ್ರಹಿಸಿ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ಖಂಡಿಸಿ ಕಪ್ಪುಬಟ್ಟೆ ಪ್ರದರ್ಶನ ಹಾಗೂ ಘೇರಾವ್ ಹಾಕುವುದು ಇವರ ಮುಖ್ಯ ಉದ್ದೇಶವಾಗಿತ್ತು. ಆದರೆ, ಗದಗ ನಗರದಲ್ಲಿನ ತೋಂಟದಾರ್ಯ ಮಠದ ಮಹಾದ್ವಾರದ ಬಳಿಯೇ ಮುಖಂಡರನ್ನು ವಶಕ್ಕೆ ಪಡೆಯಲಾಯಿತು. ರೋಣ ಹಾಗೂ ನರೇಗಲ್ಲ ಪಟ್ಟಣದಲ್ಲೂ ಪಂಚಮಸಾಲಿ ಮುಖಂಡರನ್ನು ವಶಕ್ಕೆ ಪಡೆದು ನರೇಗಲ್ಲ ಠಾಣೆಗೆ ಕರೆದೊಯ್ಯಲಾಗಿತ್ತು. ವಿಷಯ ತಿಳಿದು ಸ್ಥಳೀಯ ಪಂಚಮಸಾಲಿ ಮುಖಂಡರು ಪೊಲೀಸ್ ಠಾಣೆಯ ಮುಂದಿನ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಆನಂದ ಕರಿಬಿಷ್ಠಿ ಸೇರಿ ಅನೇಕರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.