Arrest of murder suspects 
ಜಿಲ್ಲೆ

ಕೊಲೆ ಆರೋಪಿಗಳ ಬಂಧನ

ಲೋಕೇಶ್ ಮನು. ಡಿ

ಮದ್ದೂರು: ಪತ್ನಿಯನ್ನು ಕೊಂದು ಶವವನ್ನು ಪಟ್ಟಣದ ಕೊಲ್ಲಿ ನಾಲೆಗೆ ಎಸೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.

ಛತ್ತೀಸ್‌ಘಡ ಮೂಲದ ಚಂದ್ರಿಕಾ(35) ಕೊಲೆಯಾದವರು. ಈಕೆಯ ಪತಿ ಭಯಂಕರ ಧ್ರುವ (ಅಜಯ್) ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ್ದ ಸ್ನೇಹಿತ ಗೋವಿಂದಪ್ಪನನ್ನು ಬಂಧಿಸಲಾಗಿದೆ.

ಪಟ್ಟಣದ ಪೂರ್ಣಪ್ರಜ್ಞಾ ಶಾಲೆಯ ಹಿಂಭಾಗದ ಕೊಲ್ಲಿ ನಾಲೆಯಲ್ಲಿ ಸೋಮವಾರ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರೋಪಿಗಳ ಪತ್ತೆಗೆ ತನಿಖಾ ತಂಡ ರಚಿಸಲಾಗಿತ್ತು. ಬಾರ್‌ನಲ್ಲಿ ಸಿಕ್ಕ ಜಾಡು ಹಿಡಿದು ಪತ್ತೆ ಕಾರ್ಯ ಆರಂಭಿಸಿದ ಮದ್ದೂರು ಪೊಲೀಸರು ಮೃತ ಮಹಿಳೆಯ ಪತಿ ಭಯಂಕರ ಧ್ರುವ, ಸ್ನೇಹಿತ ಗೋವಿಂದಪ್ಪನನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಕೊಲೆ ಆರೋಪಿ ಹಾಗೂ ಮೃತ ಮಹಿಳೆ ಇಬ್ಬರು 6 ತಿಂಗಳನಿಂದ ಪಟ್ಟಣದ ಆಸುಪಾಸಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ನಿತ್ಯ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. ಭಾನುವಾರ ರಾತ್ರಿ ಕುಡಿದ ಅಮಲಿನಲ್ಲಿದ್ದ ವೇಳೆ ಆರೋಪಿ ಭಯಂಕರ ಧ್ರುವ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಶವವನ್ನು ತನ್ನ ಸ್ನೇಹಿತ ಗೋವಿಂದಪ್ಪ ಅವರ ಸಹಾಯದಿಂದ ಇಬ್ಬರು ಸೇರಿ ಮೃತದೇಹವನ್ನು ಪ್ಲಾಸ್ಟಿಕ್ ಚೀಲವೊಂದಕ್ಕೆ ಹಾಕಿ, ಕಲ್ಲು ಕಟ್ಟಿ ಎಸೆದಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆಯ ಜಾಡು ಹಿಡಿದ ಪಟ್ಟಣದ ಪೊಲೀಸರು, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾರ್ಗದರ್ಶನದಲ್ಲಿ ಕಾರ್ಯಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಿಪಿಐ ಶಿವಕುಮಾರ್, ಸಿಬ್ಬಂದಿ ರೇವಣ್ಣ, ಕುಮಾರ್‌ಸ್ವಾಮಿ, ಪ್ರಶಾಂತ್, ಮಹೇಶ್, ಶರತ್ ಭಾಗವಹಿಸಿದ್ದರು.