ವಿಜಯಪುರ ಜಿಲ್ಲಾಡಳಿತಕ್ಕೆ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಂಗನಬಸವ ಸ್ವಾಮೀಜಿ, ಆಲಮೇಲದ ಜಯದೇವ ಮಲ್ಲಿಬೊಮ್ಮಯ್ಯ. ವಿರತೀಶಾನಂದ ಸ್ವಾಮೀಜಿ ಮತ್ತಿತರರಿದ್ದಾರೆ.  
ಜಿಲ್ಲೆ

ಶಾಸಕ ಯತ್ನಾಳ-ಪೇಜಾವರ ಶ್ರೀಗಳನ್ನು ಬಂಧಿಸಿ, ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ವಿಜಯಪುರ: ಬಸವಣ್ಣನವರ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂವಿಧಾನಕ್ಕೆ ಅಗೌರವ ತೋರಿದ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ವಿಶ್ವ ಒಕ್ಕಲಿಗರ ಪೀಠದ ಚಂದ್ರಶೇಖರನಾಥ ಸ್ವಾಮೀಜಿ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರಗತಿಪರ ಸಂಗಟನೆಗಳ ಪದಾಧಿಕಾರಿಗಳು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಿಂದ, ಬಸವೇಶ್ವರ ವೃತ್ತ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದ ದಲಿತರಪರ, ಪ್ರಗತಿಪರ, ಬಸವಪರ, ಸಂವಿಧಾನಪರ ಸಂಘಟನೆಗಳ ಪದಾಧಿಕಾರಿಗಳು ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು,

2024 ನ. 23ರಂದು ಬೆಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್‌ನ ಸಂತರ ಸಭೆಯಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗರ ಪೀಠದ ಚಂದ್ರಶೇಖರನಾಥ ಸ್ವಾಮೀಜಿಯವರು, ದೇಶದಲ್ಲಿರುವ ಮುಸ್ಲಿಮರ ಮತದಾನದ ಹಕ್ಕು ಕಿತ್ತುಕೊಳ್ಳಬೇಕೆಂದಿದ್ದಾರೆ. ಮುಸ್ಲಿಂರು ಭಾರತ ದೇಶದ ಅವಿಭಾಜ್ಯ ಅಂಗವಾಗಿದ್ದಾರೆ. ಭಾರತದ ಮೂಲ ನಿವಾಸಿಗಳಾದ ಮುಸ್ಲಿಂರು ಸ್ವಾತಂತ್ರ್ಯ ಹೋರಾಟ ಕಾಲದಿಂದ ಇಂದಿನವರೆಗೆ ದೇಶದ ಅಭಿವೃದ್ಧಿಯ ಸಲುವಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆಂಬುದು ಸ್ವಾಮೀಜಿಯವರ ಪ್ರಜ್ಞೆಗೆ ಬಂದಿಲ್ಲ ಎಂದರು.

ಇದೇ ಸಂತ ಸಮಾವೇಶದಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥರು ನಮಗೆ ಗೌರವ ಕೊಡುವ ಸಂವಿಧಾನ ಬೇಕು. ಈ ಸಂವಿಧಾನ ಹಿಂದುಗಳ ಪರವಾಗಿಲ್ಲ ಎನ್ನುವ ಮೂಲಕ ಸಂವಿಧಾನ ವಿರೋಧಿ ಹಾಗೂ ಉದ್ಧಟತನದ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ವಕ್ಫ್ ಹೋರಾಟದ ನೆಪದಲ್ಲಿ ಬೀದರ್‌ನಲ್ಲಿ ನಡೆದ ಸಭೆಯೊಂದರಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಸವಣ್ಣನವರು ಹೊಳೆಗೆ ಹಾರಿ ಸತ್ತರು ಎಂಬ ಅರ್ಥದಲ್ಲಿ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಇದು ಅಸಂಖ್ಯಾತ ಬಸವಾನುಯಾಯಿಗಳ ಮನಸ್ಸನ್ನು ನೋಯಿಸಿದೆ. ಹೀಗಾಗಿ ಈ ಮೂವರ ಮೇಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದರು.

ಬಸವಕಲ್ಯಾಣ ಬೇಲೂರು ಮಠದ ಸಂಗನಬಸವ ಸ್ವಾಮೀಜಿ, ಆಲಮೇಲದ ಜಯದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಮನಗೂಳಿ ವಿರಕ್ತ ಮಠದ ವಿರತೀಶಾನಂದ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಜೈನಾಪುರದ ಜಗದ್ಗುರು ರೇವಣಸಿದ್ದರ ಮಠದ ಶರಭಯ್ಯ ಸ್ವಾಮೀಜಿ, ಮುಖಂಡ ಸೋಮನಾಥ ಕಳ್ಳಿಮನಿ, ಪ್ರಭುಗೌಡ ಪಾಟೀಲ, ಅಪ್ಪಾಸಾಹೇಬ ಯರನಾಳೆ, ಅನಿಲ ಹೊಸಮನಿ, ಚನ್ನು ಕಟ್ಟಿಮನಿ, ರಾಷ್ಟ್ರೀಯ ಬಸವ ಸೇನೆಯ ಡಾ. ರವಿಕುಮಾರ ಬಿರಾದಾರ, ಬಸವರಾಜ ಕೊಂಡಗೂಳಿ, ಬಸವರಾಜ ಅಗಸರ, ಮಹಾದೇವಿ ಗೋಕಾಕ, ಆರತಿ ಶಹಾಪುರ ಮತ್ತಿತರರಿದ್ದರು.