ಕೊಳ್ಳೇಗಾಲ: ಅಪ್ರಾಪ್ತೆಯನ್ನು ಮದುವೆಯಾಗಿ ಎರಡನೇ ಮಗುವಿಗೆ ತಂದೆಯಾಗುವುದರಲ್ಲಿದ್ದ ಯುವಕನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಹೊಂಡರಬಾಳು ಗ್ರಾಮದ ರಾಜಶೇಖರ್(25) ಬಂಧಿತ. ಈತ 16 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗಿದ್ದ. ಮದುವೆ ಬಳಿಕ 2021ರಲ್ಲಿ ಅಪ್ರಾಪ್ತೆ ಒಂದು ಮಗುವಿಗೆ ಜನ್ಮ ನೀಡಿದ್ದಳು. ಆದರೀಗ 2ನೇ ಬಾರಿಗೆ ಗರ್ಭಿಣಿಯಾಗಿದ್ದು, ಕಾಮಗೆರೆ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಆಗಮಿಸಿದ್ದರು. ಈ ವೇಳೆ ಅಪ್ರಾಪ್ತ ವಯಸ್ಸಿನಲ್ಲೇ ಈಕೆ ವಿವಾಹವಾಗಿದ್ದಳು ಎಂದು ತಿಳಿದುಬಂದಿದೆ. ನಂತರ ವೈದ್ಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದೂರು ನೀಡಿದ್ದರು.
ಅದರಂತೆ ಇಲಾಖೆಯ ಮೇಲ್ವಿಚಾರಕಿ ಪೂರ್ಣಿಮಾ, ಅಪ್ರಾಪ್ತೆ ಮದುವೆಯಾಗಿ ಎರಡನೇ ಮಗುವಿನ ಜನ್ಮಕ್ಕೆ ಕಾರಣನಾಗಿದ್ದ ಆಕೆಯ ಪತಿ ಹಾಗೂ ಎರಡು ಕಡೆಯ ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಜಶೇಖರ್‌ನನ್ನು ಬಂಧಿಸಿದ್ದಾರೆ.