ಜಿಲ್ಲೆ

ಅಕ್ರಮ ಮದ್ಯ ಸಾಗಿಸುತ್ತಿದ್ದವನ ಬಂಧನ

Mysuru - Desk - Ravikumar

ಚಾಮರಾಜನಗರ: ಹನೂರು ತಾಲೂಕಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಾಲ್‌ರೋಡ್ ಚೆಕ್‌ಪೋಸ್ಟ್ ಬಳಿ ಸೋಮವಾರ ಸಂಜೆ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.


ತಮಿಳುನಾಡಿನ ಈರೋಡ್ ಜಿಲ್ಲೆ, ಅಂದಿಯೂರು ತಾಲೂಕಿನ ಯಟ್ಟಿಕುಟ್ಟ ಪಾಳ್ಯಂ ಗ್ರಾಮದ ಕುಪ್ಪುಸ್ವಾಮಿ (53) ಬಂಧಿತ. ಆರೋಪಿಯಿಂದ 6055 ರೂ. ಮೌಲ್ಯದ 180 ಮಿಲಿ ಪ್ರಮಾಣದ 48 ಪೌಚ್‌ಗಳು ಹಾಗೂ 90 ಮಿ.ಲಿ.ಯ 96 ಪೌಚ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತ ಸೋಮವಾರ ಸಂಜೆ 6ಗಂಟೆ ಸಮಯದಲ್ಲಿ ತಾಲೂಕಿನ ಮಾರ್ಟಳ್ಳಿಯಿಂದ ಮದ್ಯವನ್ನು ಖರೀದಿಸಿ ತಮಿಳುನಾಡಿನ ಹಂದಿಯೂರಿನ ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ.

ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ಎಸ್ಪಿ ಡಾ.ಟಿ.ಬಿ ಕವಿತಾ ಹಾಗೂ ಡಿವೈಎಸ್ಪಿ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಈಶ್ವರ್ ಹಾಗೂ ಸಿಬ್ಬಂದಿ ತಂಡ ನಾಲ್‌ರೋಡ್ ಚೆಕ್ ಪೋಸ್ಟ್‌ನಲ್ಲಿ ದಾಳಿ ನಡೆಸಿದರು. ಕಾರನ್ನು ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದು ದೃಢಪಟ್ಟಿದೆ. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.

ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದಾಳಿಯಲ್ಲಿ ಎಎಸ್‌ಐ ಮಹದೇವಸ್ವಾಮಿ, ಮುಖ್ಯ ಪೇದೆಗಳಾದ ಸಿದ್ದೇಶ್‌ಕುಮಾರ್, ನಾಗಶೆಟ್ಟಿ ಪೇದೆಗಳಾದ ಮಹೇಂದ್ರ ಹಾಗೂ ಪರಮೇಶ ಭಾಗವಹಿಸಿದ್ದರು.