ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಜಪ್ತಿ ಮಾಡಿದ ವಾಹನಗಳು ಮತ್ತು ಅಡಕೆ. 
ಜಿಲ್ಲೆ

ಅಡಕೆ ಕಳ್ಳತನ ಮಾಡುತ್ತಿದ್ದ ಐವರ ಬಂಧನ

ನವೀನ ಬಿ.ಎಂ

ಶಿವಮೊಗ್ಗ: ಸಾಗರ ಮತ್ತು ಸೊರಬ ಭಾಗದಲ್ಲಿ ಹಸಿ ಶುಂಠಿ, ಅಡಕೆ ಕಳ್ಳತನ ಮಾಡುತ್ತಿದ್ದ ಐವರ ತಂಡವನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದು 15.19 ಲಕ್ಷ ರೂ. ಮೌಲ್ಯದ ವಸ್ತುಗಳು, ವಾಹನಗಳು, ಲಾಂಗು ಮತ್ತು ಕಬ್ಬಿಣದ ರಾಡುಗಳನ್ನು ಜಪ್ತಿ ಮಾಡಿದ್ದಾರೆ.

ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಮೋಜು ಮಸ್ತಿಗಾಗಿ ಅಡಕೆ ಕಳ್ಳತನ ಮಾಡಿದ್ದು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ. ಎಂಟು ಪ್ರಕರಣಗಳಲ್ಲಿ ಶಿಕಾರಿಪುರ ತಾಲೂಕಿನ ಒಂದೇ ಗ್ರಾಮದ ಐವರನ್ನು ಬಂಧಿಸಿದ್ದು ಹೊಸನಗರದ ಇಬ್ಬರು ತಲೆಮರೆಸಿಕೊಂಡಿದ್ದಾರೆ.
ಶಿಕಾರಿಪುರ ತಾಲೂಕಿನ ಹರಗುವಳ್ಳಿ ಗ್ರಾಮದ ತುಕ್‌ರಾಜ್ (24), ಹನುಮಂತಪ್ಪ (24), ರಾಕೇಶ್(30), ಅಭಿಷೇಕ್(20) ಮತ್ತು ಶಿವಕುಮಾರ್(23) ಬಂಧಿತರು. ಆರೋಪಿಗಳ ಮೇಲೆ ಇದು ಮೊದಲ ಪ್ರಕರಣವಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಗರ ಗ್ರಾಮಾಂತರ, ಆನಂದಪುರ ಠಾಣೆಯಲ್ಲಿ ತಲಾ ಮೂರು, ಕಾರ್ಗಲ್ ಮತ್ತು ಸೊರಬ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಅಡಕೆ ಕಳವು ಪ್ರಕರಣಗಳು ದಾಖಲಾಗಿದ್ದವು. ಸಾಗರ ಡಿವೈಎಸ್ಪಿ ಟಿ.ಗೋಪಾಲಕೃಷ್ಣ ನಾಯ್ಕ ಅವರ ಮೇಲ್ವಿಚಾರಣೆಯಲ್ಲಿ ಸಾಗರ ಗ್ರಾಮಾಂತರ ಇನ್‌ಸ್ಪೆಕ್ಟರ್ ಎಸ್.ಎನ್.ಮಹಾಬಲೇಶ್ವರ, ಪಿಎಸ್‌ಐ ಎ.ಆರ್.ಮುಂದಿನಮನಿ, ಸಿಬ್ಬಂದಿ ಸನಾವುಲ್ಲಾ, ಶೇಖ್ ಫೈರೋಜ್ ಅಹಮ್ಮದ್, ರವಿಕುಮಾರ್, ಪ್ರವೀಣ್‌ಕುಮಾರ್, ಗುರುಬಸವರಾಜ, ಗಿರೀಶ್ ಬಾಬು, ಗುರುರಾಜ, ಇಂದ್ರೇಶ್, ವಿಜಯ್‌ಕುಮಾರ್ ಅವರನ್ನು ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಹೇಳಿದರು.
ಆರೋಪಿಗಳ ಕೃತ್ಯವು ತಂದೆ-ತಾಯಿಗಳಿಗೆ ಗೊತ್ತಿರಲಿಲ್ಲ. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆಂದು ಸುಮ್ಮನಾಗಿದ್ದರು. ಕೃತ್ಯ ನಡೆಸುವ ಹಿಂದಿನ ದಿನ ಹೋಗಿ ಅಡಕೆ ಸಂಗ್ರಹಿಸುತ್ತಿದ್ದ ಗೋಡೌನ್‌ಗಳನ್ನು ಪರಿಶೀಲಿಸಿಕೊಂಡು ಬರುತ್ತಿದ್ದರು. ಸಿಸಿ ಕ್ಯಾಮೆರಾಗಳು ಎಲ್ಲಿವೆ, ಯಾವ ಮಾರ್ಗದಿಂದ ಹೋದರೆ ಅನುಕೂಲ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು. ಆನಂತರ ಟಾಟಾ ಏಸ್ ಮತ್ತು ಮಹೇಂದ್ರ ಪಿಕ್ ಅಪ್ ಮೂಲಕ ಅಡಕೆ ಮೂಟೆಗಳ ಕಳ್ಳತನ ಮಾಡುತ್ತಿದ್ದರು. ಇದೀಗ ಜಪ್ತಿ ಮಾಡಿದ ಅಡಕೆಯನ್ನು ನ್ಯಾಯಾಲಯದ ಅನುಮತಿ ಪಡೆದು ರೈತರಿಗೆ ವಸ್ತುಗಳನ್ನು ಹಸ್ತಾಂತರಿಸಲಾಗುವುದು ಎಂದರು.
ಬಂಧಿತರಿಂದ 8.19 ಲಕ್ಷ ರೂ. ಮೌಲ್ಯದ ಕೆಂಪು ಅಡಕೆ, ಬಿಳಿ ಗೋಟು ಅಡಕೆ, ಚಾಲಿ, ಸಿಪ್ಪೆ ಅಡಕೆ, ಶುಂಠಿ ಮಾಡಿದ್ದ 50 ಸಾವಿರ ರೂ. ನಗದು, 2.50 ಲಕ್ಷ ರೂ ಮೌಲ್ಯದ ಟಾಟಾ ಏಸ್, 4 ಲಕ್ಷ ರೂ. ಮೌಲ್ಯದ ಮಹೇಂದ್ರ ಪಿಕ್‌ಅಪ್ ವಾಹನವನ್ನು ಜಪ್ತಿ ಮಾಡಲಾಗಿದೆ. ಬೇರೆ ಜಿಲ್ಲೆಗಳಲ್ಲಿಯೂ ಅಡಕೆ ಕಳ್ಳತನ ಮಾಡಿದ್ದಾರಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು. ಎಎಸ್ಪಿ ಎ.ಜಿ.ಕಾರ್ಯಪ್ಪ, ಸಾಗರ ಡಿವೈಎಸ್ಪಿ ಟಿ.ಗೋಪಾಲಕೃಷ್ಣ ನಾಯ್ಕ, ಸಾಗರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಎಸ್.ಎನ್.ಮಹಾಬಲೇಶ್ವರ ಸುದ್ದಿಗೋಷ್ಠಿಯಲ್ಲಿದ್ದರು.