ಜಿಲ್ಲೆ

ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ: ತಡರಾತ್ರಿ ಹೆಲ್ತ್ ಕ್ವಾಟರ್ಸ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸರ್ಕಾರಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿ

ಮಂಡ್ಯ: ಎಷ್ಟೇ ಕಟ್ಟುನಿಟ್ಟಿನ ಕ್ರಮ ವಹಿಸಿದರೂ ಹಾಗೂ ಜಾಗೃತಿ ಮೂಡಿಸಿದರೂ ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ನಿಲ್ಲಿಸಲು ಆಗುತ್ತಿಲ್ಲ. ಭಾನುವಾರ ತಡರಾತ್ರಿ ಪಾಂಡವಪುರ ಪಟ್ಟಣದ ಹೆಲ್ತ್ ಕ್ವಾಟರ್ಸ್‌ನಲ್ಲಿ ಭ್ರೂಣ ಹತ್ಯೆ ಮಾಡುವ ವೇಳೆ ಭ್ರೂಣ ಹತ್ಯೆ ವೇಳೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಾಂಡವಪುರ ತಾಲೂಕು ಆಸ್ಪತ್ರೆಯ ಇಬ್ಬರು ನೌಕರರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಮಹಿಳೆಯೊಬ್ಬರು ಮೂರನೇ ಮಗುವಿನ ಭ್ರೂಣ ಪತ್ತೆ ಮಾಡಿದ್ದು, ಹೆಣ್ಣೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಗರ್ಭಪಾತ ಮಾಡಿಸಲು ಪಾಂಡವಪುರ ಪಟ್ಟಣಕ್ಕೆ ಬಂದಿದ್ದರು. ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಅಧಿಕಾರಿಗಳ ತಂಡ ದಾಳಿ ನಡೆಸಿ ಗರ್ಭಿಣಿಯನ್ನು ರಕ್ಷಣೆ ಮಾಡಿದ್ದಾರೆ.
ಇತ್ತೀಚೆಗೆ ಭ್ರೂಣ ಹತ್ಯೆ ಪ್ರಕರಣದಿಂದಾಗಿ ಮಂಡ್ಯ ಜಿಲ್ಲೆ ಸಾಕಷ್ಟು ಸದ್ದು ಮಾಡಿತು. ಮಾತ್ರವಲ್ಲದೆ ದೊಡ್ಡಮಟ್ಟದ ತನಿಖೆಯೂ ನಡೆಯಿತು. ಆದಾಗ್ಯೂ ಮತ್ತೆ ಕರಾಳದಂಧೆ ತಲೆ ಎತ್ತಿರುವುದು ದುರಂತ. ಇನ್ನು ಈಗ ಪತ್ತೆಯಾಗಿರುವ ಪ್ರಕರಣದಲ್ಲಿ ಕೆಲ ವೈದ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಗಂಭೀರ ಸ್ವರೂಪ ಪಡೆದುಕೊಂಡಿದೆ.