ಜಿಲ್ಲೆ

ಪೊಲೀಸರ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದವನ ಸೆರೆ

ರಾಮನಗರ :ಪೊಲೀಸ್ ಸೋಗಿನಲ್ಲಿ ಪ್ರಯಾಣಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಸುಲಿಗೆಕೋರನನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಎಡತಲೆ ಗ್ರಾಮದ ಗಿರೀಶ್ ಕುಮಾರ್ ಎಚ್.ಬಿ. ಅಲಿಯಾಸ್ ಹ್ಯಾಂಡ್‌ಕಫ್ ಗಿರಿ (33) ಬಂಧಿತ. ಆತನಿಂದ 168 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದೂರು ನೀಡಿದ್ದರು:

ಚನ್ನಪಟ್ಟಣ ತಾಲೂಕಿನ ಹೊಟ್ಟಿಗನಹೊಸಳ್ಳಿ ಗ್ರಾಮದ ನಾಗೇಶ್ ಎಂಬುವರು ಬೆಂಗಳೂರಿನ ಬಿಡಬ್ಲೂೃ ಎಸ್‌ಎಸ್‌ಬಿಯಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದು, ಫೆ.7ರಂದು ಕರ್ತವ್ಯ ಮುಗಿಸಿ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸರ್ವೀಸ್ ರಸ್ತೆಯಲ್ಲಿ ತಮ್ಮೂರಿಗೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದವು.

ಆಗ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಪೊಲೀಸ್ ಸಮವಸ್ತ್ರದಲ್ಲಿದ್ದ ಆರೋಪಿಗಳಿಬ್ಬರು, ಕಾರನ್ನು ಅಡ್ಡಗಟ್ಟಿದ್ದರು. ನಿಮ್ಮ ಕಾರಿನ ದಾಖಲೆಗಳನ್ನು ಪರಿಶೀಲಿಸಬೇಕೆಂದು ಹೇಳಿದ್ದರು. ಆಗ ನಾಗೇಶ್ ಅವರು ಕಾರಿನ ಡೋರ್ ತೆಗೆಯುತ್ತಿದ್ದಂತೆ ಹಲ್ಲೆ ನಡೆಸಿದ್ದ ಆರೋಪಿಗಳು ಹ್ಯಾಂಡ್‌ಕಫ್ ಮತ್ತು ಚಾಕು ತೋರಿಸಿ, ನಿನ್ನಲ್ಲಿರುವ ಚಿನ್ನ ಹಾಗೂ ನಗದು ಕೊಡು. ಇಲ್ಲದಿದ್ದರೆ ನಿನ್ನನ್ನು ಎಳೆದುಕೊಂಡ ಹೋಗಿ ಲಾಕಪ್‌ಗೆ ಹಾಕುತ್ತೇನೆ ಎಂದು ಹೆದರಿಸಿದರು.

ನಾಗೇಶ್ ಬಳಿ ಇದ್ದ 10 ಗ್ರಾಂ ಚಿನ್ನದುಂಗರ ಹಾಗೂ 14 ಸಾವಿರ ರೂ. ನಗದು ಕಿತ್ತುಕೊಂಡು ಪರಾರಿ ಆಗಿದ್ದರು. ಈ ಸಂಬಂಧ ನಾಗೇಶ್ ನೀಡಿದ ದೂರಿನ ಮೇರೆಗೆ ರಾಮನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಅಂತಿಮವಾಗಿ ಪ್ರಮುಖ ಆರೋಪಿ ಹ್ಯಾಂಡ್ ಕಾಫ್ ಗಿರಿಯನ್ನು ಬಂಧಿಸಿದ್ದು, ಇವರ ಬಂಧನದಿಂದ ವಿವಿಧೆಡೆ ನಡೆದಿದ್ದ ಇದೇ ರೀತಿಯ 9 ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ. ಮತ್ತೊಬ್ಬ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.