ಜಿಲ್ಲೆ

ಗಾಂಜಾ ಮಾರಲು ಯತ್ನಿಸುತ್ತಿದ್ದವನ ಬಂಧನ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಒಣ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರಿನ ಆನೆಕಲ್ ನಿವಾಸಿ ನಾಗರಾಜು (35) ಬಂಧಿತ ಆರೋಪಿ.


ಈತ ಶನಿವಾರ ಮಧ್ಯಾಹ್ನ ಮಹದೇಶ್ವರಬೆಟ್ಟದ ತೋಟಗಾರಿಕೆ ಇಲಾಖೆಯ ಆಸುಪಾಸು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಮಾರ್ಗದರ್ಶನದಲ್ಲಿ ಆತನನ್ನು ಪರಿಶೀಲಿಸಿದಾಗ ಗಾಂಜಾ ಇರುವುದು ದೃಢಪಟ್ಟಿದೆ. ಬಳಿಕ 650 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಜಯರಾಮ್, ಅಸ್ಲಾಂಪಾಷ ಇತರರಿದ್ದರು. ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.