ಜಿಲ್ಲೆ

ಯುವತಿಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದವನ ಬಂಧನ

ಸಿದ್ದಾಪುರ: ಯುವತಿ ಮೊಬೈಲ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ದಾಪುರದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಕರಡಿಗೋಡು ನಿವಾಸಿ ಅಬೂಬಕ್ಕರ್ ಬಂಧಿತ. ಈತನ ಮೊಬೈಲ್ ಅಂಗಡಿಗೆ ಇತ್ತೀಚೆಗೆ ಬಂದಿದ್ದ ಯುವತಿಯೊಬ್ಬಳು ರಿಪೇರಿಗಾಗಿ ಮೊಬೈಲ್ ನೀಡಿದ್ದಳು. ಎರಡು ದಿನಗಳ ನಂತರ ರಿಪೇರಿಯಾದ ಮೊಬೈಲ್ಅನ್ನು ಪಡೆದುಕೊಂಡಿದ್ದಳು. ಆ ಬಳಿಕ ಅನಾಮಧೇಯ ಸಂಖ್ಯೆಯಿಂದ ಯುವತಿ ಮೊಬೈಲ್‌ಗೆ ಅಶ್ಲೀಲ ಸಂದೇಶಗಳು ಬರತೊಡಗಿದ್ದವು.

ಈ ವಿಚಾರದ ಬಗ್ಗೆ ಯುವತಿಯ ಪಾಲಕರು ದೂರವಾಣಿ ಮೂಲಕ ಎಚ್ಚರಿಕೆ ನೀಡಿದ್ದರೂ ಅಶ್ಲೀಲ ಸಂದೇಶಗಳು ಬರುತ್ತಿದ್ದವು. ಅಪರಿಚಿತ ಯಾರು ಎಂಬುದು ಪತ್ತೆ ಹಚ್ಚುವ ಸಲುವಾಗಿ ಯುವತಿ ಹಾಗೂ ಆಕೆಯ ಸ್ನೇಹಿತರು ಸೇರಿ ಆತನನ್ನು ಹುಣಸೂರಿಗೆ ಬರುವಂತೆ ಹೇಳಿದ್ದಾರೆ. ಅಬೂಬಕ್ಕರ್ ಹುಣಸೂರಿಗೆ ತೆರಳಿ ಯುವತಿಗಾಗಿ ಕಾದು ಕುಳಿತ್ತಿದ್ದನು. ಯುವತಿ ಬಸ್‌ನಲ್ಲಿ ಹಾಗೂ ಆಕೆಯ ಸ್ನೇಹಿತರು ವಾಹನದಲ್ಲಿ ಹಿಂಬಾಲಿಸಿದ್ದರು. ಹುಣಸೂರಿನ ಬಸ್ ನಿಲ್ದಾಣಕ್ಕೆ ತೆರಳಿದ ಯುವತಿಗೆ ಅನಾಮಧೇಯ ಸಂಖ್ಯೆಯಿಂದ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಅಬೂಬಕ್ಕರ್‌ನನ್ನು ಯುವತಿ ಗುರುತಿಸಿದಳು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆಕೆಯ ಸ್ನೇಹಿತರು ಆತನನ್ನು ಹುಣಸೂರು ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಿ, ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಹುಣಸೂರು ಪಟ್ಟಣ ಠಾಣೆ ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್ ಆರೋಪಿ ಅಬೂಬಕ್ಕರ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.