ಜಿಲ್ಲೆ

ಹಲ್ಲೆ ಮಾಡಿದ್ದ 6 ರೌಡಿಶೀಟರ್‌ಗಳ ಬಂಧನ

ಮರಿದೇವ ಹೂಗಾರ

ಹುಬ್ಬಳ್ಳಿ: ಶಹರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮಹ್ಮದ್‌ರಫಿಕ್ ತಹಸೀಲ್ದಾರ್ ಹಾಗೂ ಸಿಸಿಬಿ ನೇತೃತ್ವದಲ್ಲಿ ದಾಳಿ ಮಾಡಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ 6 ಜನ ರೌಡಿ ಸೇರಿ 9 ಜನರನ್ನು ಬಂಧಿಸಲಾಗಿದೆ. ರೌಡಿಶೀಟರ್‌ಗಳಾದ ಮಂಜುನಾಥ ಅಲಿಯಾಸ್ ಸೈಟಿಂಸ್ಟ್ ಮಂಜ್ಯಾ ಮತ್ತು ಜಿಲಾನಿ ಅಲಿಯಾಸ್ ಜೀಲು ದಾವಲ್‌ಸಾಬ್ ನದಾಫ್ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.

ದಾದಾಪೀರ ಮುಲ್ಲಾ, ದಾವುದ್ ನದಾಫ್, ಅಬ್ದುಲ್ ಕರೀಂ ಬಳ್ಳಾರಿ, ಮಹ್ಮದ್‌ಯುಸೂಫ್ ಕುಸುಗಲ್, ರಮೇಶ ತಂಬೆಕರ, ಮಹ್ಮದ್ ಅಲಿ ಸಿಂಧಗಿ, ರಾಕೇಶ ಮುದರಕಲ್, ಸೈಯದಲಿ ಮುಳಗುಂದ, ಶಿವಾಜಿ ಮದರಾಸಿ ಸೇರಿ 19 ಜನರನ್ನು ಬಂಧಿಸಲಾಗಿದೆ.

ಮಂಟೂರ ರಸ್ತೆಯ ಅರಳಿಕಟ್ಟಿ ಕಾಲನಿಯ ಮನೆ ಹಾಗೂ ಬುದ್ಧ ವಿಹಾರದ ಬಳಿ ಬಯಲು ಜಾಗದಲ್ಲಿ ಇಸ್ಪೀಟ್ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದರು. ಶಹರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, 19 ಜನರನ್ನು ದಸ್ತಿಗಿರಿ ಮಾಡಲಾಗಿದೆ. ಬಂಧಿತರಿಂದ 2 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 11 ಮೊಬೈಲ್ ಫೋನ್, 61530 ರೂ. ನಗದು ಹಾಗೂ 2 ಇಸ್ಪೀಟ್ ಎಲೆಗಳ ಪ್ಯಾಕ್ ವಶಪಡಿಸಿಕೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ದೀಪಾವಳಿ ಹಬ್ಬದ ನಿಮಿತ್ತ ಹು-ಧಾ ಆಯುಕ್ತಾಲಯ ವ್ಯಾಪ್ತಿಯಲ್ಲಿ ಜೂಜಾಟಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಜೂಜಾಟದಲ್ಲಿ ತೊಡಗಿದ್ದೇ ಆದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.