ಜಿಲ್ಲೆ

ಬಡ್ಡಿ ದಂಧೆ ನಡೆಸುತ್ತಿದ್ದ 23 ಜನರ ಬಂಧನ

ಹುಬ್ಬಳ್ಳಿ: ಹು-ಧಾ ಪೊಲೀಸ್ ಆಯಕ್ತಾಲಯ ವ್ಯಾಪ್ತಿಯಲ್ಲಿ ಮೀೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 23 ಜನರನ್ನು ಬಂಧಿಸಲಾಗಿದೆ. ಅವರಿಂದ ಕಾರ, ಸ್ಕೂಟಿ, ಮೊಬೈಲ್ ಫೋನ್ ಸೇರಿದಂತೆ ಒಟ್ಟಾರೆ 4 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಶ್ವಾಪುರ, ವಿದ್ಯಾನಗರ, ಬೆಂಡಿಗೇರಿ, ವಿದ್ಯಾಗಿರಿ, ಧಾರವಾಡ-ಹುಬ್ಬಳ್ಳಿ ಉಪನಗರ, ಕಸಬಾಪೇಟೆ ಸೇರಿದಂತೆ 13 ಠಾಣೆಗಳಲ್ಲಿ 16 ಬಡ್ಡಿ ಕಿರುಕುಳ ಪ್ರಕರಣ ದಾಖಲಾಗಿದ್ದವು. ತನಿಖೆ ಕೈಗೊಂಡು ಪ್ರಕರಣದ ಸತ್ಯಾಸತ್ಯತೆ ಹಾಗೂ ಸಾಕ್ಷ್ಯಾಧಾರ ಕಲೆಹಾಕಿ ಶನಿವಾರ ಮತ್ತು ಭಾನುವಾರ 23 ಆರೋಪಿಗಳನ್ನು ಬಂಧಿಸಲಾಗಿದೆ.
ಹುಬ್ಬಳ್ಳಿ ಉಪನಗರ ಠಾಣೆ ವ್ಯಾಪ್ತಿಯ ಇಬ್ಬರು ಮಹಿಳೆಯರು ಸೇರಿ ರಾಜೇಶ್ ಮೆಹರವಾಡೆ, ಮೋಹಿತ್ ಮೆಹರವಾಡೆ ಮೇಲೆ 2 ಪ್ರಕರಣ, ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸತೀಶ್ ದೊಡ್ಡಮನಿ, ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನವೀನ್ ಭಾಂಡಗೆ, ದತ್ತು ಪಟ್ಟನ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.
ಕಮರಿಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆ ವಿರುದ್ಧ, ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸೋಲೋಮನ್ ಬಬ್ಬಾ, ಆನಂದ ರಾಯಚೂರು, ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಟಿಫನ್ ಕ್ಷೀರಸಾಗರ, ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಮೀರ್, ಸೈಯದ್ ಅಲಿ, ಬಿ.ಕೆ. ಭಾಯಿ, ಹ್ಯಾರೀಶ ಪಠಾಣ, ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಾವೇದ್ ಘೋಡೆಸವಾರ, ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಕೀರ ಕರಡಿಗುಡ್ಡ, ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆ ಸೇರಿ ಗಿರಿಯಪ್ಪ ಬಳ್ಳಾರಿ, ಬಾಲು ಬಳ್ಳಾರಿ, ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ತನ್ವೀರ್ ಜಂಗ್ಲಿವಾಲೆ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣ ಕಾಟಿಗಾರ, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.
ಕಡಿಮೆ ಹಣಕ್ಕೆ ಹೆಚ್ಚು ಬಡ್ಡಿ ವಸೂಲಿ ಮಾಡುವುದು, ಅಸಲು-ಬಡ್ಡಿ ಪಾವತಿಸಿದರೂ ಮೀಟರ್ ಬಡ್ಡಿ ಹಾಕಿ ಅದನ್ನೂ ಪಾವತಿಸಲು ಮಾನಸಿಕ ಕಿರುಕುಳ ನೀಡುವುದು ಬೆಳಕಿಗೆ ಬಂದಿತ್ತು. ಬಡ್ಡಿ, ಅಸಲು ತುಂಬಿದರೂ ಮತ್ತೆ ಅಸಲು ತುಂಬಬೇಕು ಎಂದು ಒತ್ತಡ ಹಾಕಲಾಗಿತ್ತು. ವಾಹನ, ಬಂಗಾರ ಅಡ ಇಟ್ಟುಕೊಂಡು ಕಿರುಕುಳ ನೀಡುವುದು ಕಾನೂನು ಬಾಹಿರ ಕೃತ್ಯವಾಗಿದೆ. ಕೈಗಡ ಪಡೆದ ಸಾಲಕ್ಕೂ ನಾಲ್ಕು ಪಟ್ಟು ಬಡ್ಡಿ ಹಾಕಿ ಹಿಂಸೆ ನೀಡುವುದು ಸರಿಯಲ್ಲ. ನೊಂದವರು ಧೈರ್ಯವಾಗಿ ಠಾಣೆಗೆ ಬಂದು ದೂರು ನೀಡಬೇಕು. ದೂರು ಇಲ್ಲದೆ ನಾವು ಏನೂ ಮಾಡಲು ಸಾಧ್ಯವಿಲ್ಲ. ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್., ಎಸಿಪಿಗಳಾದ ಶಿವಪ್ರಕಾಶ್ ನಾಯಕ್, ಉಮೇಶ ಚಿಕ್ಕಮಠ, ವಿವಿಧ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಇದ್ದರು.