ಜಿಲ್ಲೆ

ಜೂಜಾಡುತ್ತಿದ್ದ 23 ಜನರ ಬಂಧನ

ಮಳವಳ್ಳಿ: ತಾಲೂಕಿನ ಶಿಂಷಾಪುರ ರಸ್ತೆಯಲ್ಲಿರುವ ಮಲ್ಲಿಕ್ಯಾತನಹಳ್ಳಿ ಬಳಿಯ ತೋಟದ ಮನೆಯೊಂದರಲ್ಲಿ ಬುಧವಾರ ಬೆಳಗಿನ ಜಾವ ಲಕ್ಷಾಂತರ ರೂ.ಗಳನ್ನು ಪಣಕ್ಕಿಟ್ಟು ಜೂಜಾಡುತ್ತಿದ್ದ ಗುಂಪನ್ನು ಬೆಳಕವಾಡಿ ಪೊಲೀಸರು ಬಂಧಿಸಿ ನಗದು ಸೇರಿದಂತೆ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಮಲ್ಲಿಕ್ಯಾತನಹಳ್ಳಿ ಬಳಿ ಬೆಂಗಳೂರು ನಿವಾಸಿ ಮಹಮದ್ ಜಮೀರ್ ಷಾ ಅವರ ತೋಟದ ಮನೆಯಲ್ಲಿ ಸುಮಾರು 23 ಜನರಿದ್ದ ಗುಂಪು ಇಸ್ಪೀಟ್ ಕಾರ್ಡ್ ಬಳಸಿ ಲಕ್ಷಗಟ್ಟಲೆ ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದರು.

ಖಚಿತ ಮಾಹಿತಿ ಆಧರಿಸಿ ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್, ಬೆಳಕವಾಡಿ, ಕಿರುಗಾವಲು, ಹಲಗೂರು ಠಾಣೆಯ 40 ಕಾನ್‌ಸ್ಟೆಬಲ್‌ಗಳು ದಾಳಿ ನಡೆಸಿ, 23 ಜನರನ್ನು ಬಂಧಿಸಿದ್ದು, ದಾಳಿ ವೇಳೆ ಪಣಕ್ಕಿಟ್ಟಿದ್ದ 2,58,770 ರೂ. ನಗದು ಸೇರಿದಂತೆ 25 ಮೊಬೈಲ್ ಫೋನ್, ಮೂರು ಬೈಕ್, 5 ಕಾರುಗಳು, ಒಂದು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.