ಜಿಲ್ಲೆ

ಫಾಸ್ಟ್ ಅಂಡ್ ಫ್ಯೂರಿಸ್ ಹಾಲಿವುಡ್ ಸ್ಟಂಟ್ ಸಿನಿಮಾ‌ ಮಾದರಿಯಲ್ಲಿ ಕೋಟ್ಯಂತರ ಮಾಲು ಕದ್ದವರ ಬಂಧನ

ಚಿಕ್ಕಬಳ್ಳಾಪುರ: ಫಾಸ್ಟ್ ಅಂಡ್ ಫ್ಯೂರಿಸ್ ಹಾಲಿವುಡ್ ಸಿನಿಮಾ ಮಾದರಿಯಲ್ಲಿ ಕಂಟೇನರ್ ವಾಹನದಲ್ಲಿನ 3 ಕೋಟಿ ರೂ ಹೆಚ್ಚು ಮೌಲ್ಯದ ಮೊಬೈಲುಗಳು ಕಳವು ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು, 7 ಜನರನ್ನು ಮಾಲು ಸಮೇತ ಬಂಧಿಸಿದ್ದಾರೆ.
ಹೌದು! ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನದ ಕಂಟೇನರ್ ಅನ್ನು ಮಾರ್ಗ ಮಧ್ಯೆ ತುಂಡರಿಸಿ, ಒಳಗಿನ ಕೋಟ್ಯಂತರ ರೂ ಮೌಲ್ಯದ ಮೊಬೈಲ್ ಗಳನ್ನು ಕದಿಯಲು ಹರಸಾಹಸದ ಸ್ಟಂಟ್ ಪ್ರದರ್ಶನ, ದೊಡ್ಡ ಜಾಲದ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ಮಾರಿ ಹಣವನ್ನು ಸಂಪಾದಿಸಿದ ದೊಡ್ಡ ಚಾಲಾಕಿ ಕಳ್ಳತನ ಪ್ರಕರಣವು ವ್ಯಾಪಕವಾಗಿ ಚರ್ಚೆಗೆಗ್ರಾಸವಾಗಿತ್ತು. ಟ್ರಕ್ ಚಾಲಕ ಸೇರಿದಂತೆ ಹಲವರು ದುಷ್ಕೃತ್ಯದಲ್ಲಿ ಪಾಲು ಹೊಂದಿದ್ದು ಪೊಲೀಸ್ ತನಿಖೆಯಲ್ಲಿ ಎಲ್ಲವೂ ಹೊರ ಬಂದಿದೆ. ಇದೀಗ ಆರೋಪಿಗಳು ಜೈಲು ಪಾಲಾಗಿದ್ದು ಮಾರಾಟದ ಮೊಬೈಲುಗಳ ಜಾಡು ಸಿಕ್ಕಿರುವುದರಿಂದ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

*ಪ್ರಕರಣದ ಹಿನ್ನೆಲೆ
ಕಳೆದ 2024 ನೇ ಸಾಲಿನ ನ.22 ರಂದು ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್ ವಾಹನದಲ್ಲಿ ಸಾಗಿಸುತ್ತಿದ್ದ 3 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮೊಬೈಲ್ ಕಳುವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನ.28 ರಂದು ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನೋಯ್ಡಾದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಎಂಐ ಕಂಪನಿಗೆ ಸೇರಿದ ಮೊಬೈಲ್ ಗಳನ್ನು ಕಂಟೇನರ್ ರ್ನಲ್ಲಿ ಸಾಗಿಸಲಾಗುತ್ತಿತ್ತು. ರೆಡ್ಡಿಗೊಲ್ಲವಾರಹಳ್ಳಿ ಕ್ರಾಸ್ ಸಮೀಪ ವಾಹನ ನಿಂತು ಹೋಗಿದ್ದು, ಚಾಲಕ ನಾಪತ್ತೆಯಾಗಿದ್ದಾನೆ. ಜಿಪಿಎಸ್ ಆಧಾರದಲ್ಲಿ ವಾಹನವನ್ನು ಪತ್ತೆ ಹಚ್ಚಿದ ಸಿಬ್ಬಂದಿಗೆ, 3 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮೊಬೈಲ್ ಗಳು ಕಳವಾಗಿರುವುದು ತಿಳಿದು ಬಂದಿದೆ ಎಂದು ಕಂಪನಿ ಮಾಲೀಕರು ದೂರಿನಲ್ಲಿ ತಿಳಿಸಿದ್ದರು.

*ಆರೋಪಿಗಳ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಪಲ್ವಾಲ್ ಜಿಲ್ಲೆಯ ಮಿಯೋ ರಾಹುಲ್, ಇಮ್ರಾನ್, ಮೊಹಮದ್ ಮುಸ್ತಾಾ, ಅನುಪ್ ರಾಯ್, ಅಭಿಜಿತ್ ಪೌಲ್, ಸಕೃಲ್ ಹಾಗೂ ಯೂಸುಫ್ ಖಾನ್ ಬಂಧಿತರು. ಪ್ರಸ್ತುತ 56 ಮೊಬೈಲುಗಳು ಪತ್ತೆಯಾಗಿವೆ. ಕಳ್ಳತನಕ್ಕೆ ಬಳಸಿದ್ದ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಭೇದಿಸಲು ಜಿಲ್ಲಾ ಅಪರಾಧ ತನಿಖಾ ದಳಕ್ಕೆ ತನಿಖೆಯ ಜವಾಬ್ದಾರಿ ವಹಿಸಲಾಗಿತ್ತು.

*ವಿವಿಧ ರಾಜ್ಯಗಳಲ್ಲಿ ಮಾರಾಟ
ಮಿಯೋ ರಾಹುಲ್ ಕಳ್ಳತನಕ್ಕೆ ಯೋಜನೆ ರೂಪಿಸಿ, ತಂಡದ ನೇತೃತ್ವದ ವಹಿಸಿದ್ದ. ಕೋಟ್ಯಂತರ ರೂ ಮೌಲ್ಯದ ಮೊಬೈಲು ಲೋಡನ್ನು ಸಾಗಿಸುತ್ತಿದ್ದ ಚಾಲಕನನ್ನು ಬುಟ್ಟಿಗೆ ಹಾಕಿಕೊಂಡಿದ್ದು ರೆಡ್ಡಿಗೊಲ್ಲವಾರಹಳ್ಳಿ ಕ್ರಾಸ್ ಬಳಿ ಖಾಲಿ ಕಂಟೇನರ್ ಲಾರಿಯನ್ನು ನಿಲ್ಲಿಸಿ ಹೋಗಲಾಗಿತ್ತು. ಬಳಿಕ ದೇಶದ ವಿವಿಧ ರಾಜ್ಯಗಳಿಗೆ ಬಿಡಿ ಬಿಡಿಯಾಗಿ ಕನಿಷ್ಠ 300 ರಿಂದ 400 ಮೊಬೈಲ್ ಗಳನ್ನು ಮಾರಲಾಗಿದೆ.