ಜಿಲ್ಲೆ

ಪೆಟ್ರೋಲ್​ ಬಂಕ್​ನಿಂದ ಹಣ ದೋಚಿದ್ದವರ ಸೆರೆ

ಗಂಗಾಧರ ಬಿ ವಿ

ಚನ್ನಪಟ್ಟಣ: ಪೆಟ್ರೋಲ್​ ಬಂಕ್​ ನೌಕರನನ್ನು ಬೆದರಿಸಿ, ಹಣ ದೋಚಿದ್ದ ಆರೋಪಿಗಳನ್ನು ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಹಮದ್​ ಸೂಪ್ತಿಯನ್​, ಉಮ್ರಾಜ್​ ಪಾಷ, ಮಹಮ್ಮದ್​ ಅಪ್ರಾನ್​, ಸಯ್ಯದ್​ ಶೋಹೆಬ್​ ಬಂಧಿತರು.

ಏನಿದು ಪ್ರಕರಣ?: ನಗರದ ಬಿ. ಎಂ ರಸ್ತೆಯಲ್ಲಿರುವ ಇಂಡಿಯನ್​ ಆಯಿಲ್​ ಪೆಟ್ರೋಲ್​ ಬಂಕ್​ಗೆ ನ.7ರ ಬೆಳಗ್ಗಿನ ಜಾವ ಕಾರಿನಲ್ಲಿ ಬಂದ ಆರೋಪಿಗಳು ಸ್ಕ್ಯಾನ್​ ಮಾಡುತ್ತೇವೆ, 5 ಸಾವಿರ ರೂ. ನೀಡುವಂತೆ ಬಂಕ್​ ನೌಕರರನ್ನು ಪುಸಲಾಯಿಸಿದ್ದಾರೆ. ಸ್ಕ್ಯಾನ್ ಮಾಡುವಂತೆ ನಾಟಕ ಮಾಡಿ ಉದ್ಯೋಗಿಯ ಬಳಿಯಿದ್ದ 22 ಸಾವಿರ ರೂ.ವನ್ನು ಕಿತ್ತುಕೊಂಡಿದ್ದಾರೆ.

ವಿರೋಧಿಸಿದಾಗ ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿಯಾಗಿದ್ದರು. ಈ ಕುರಿತು ಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರ ಸಿಪಿಐ ರವಿಕಿರಣ್​ ನೇತೃತ್ವದಲ್ಲಿ ತಂಡ ಪ್ರಕರಣ ಭೇದಿಸಿದ್ದು, ಬೆಂಗಳೂರಿನ ಲಕ್ಕಸಂದ್ರದಲ್ಲಿ ನಾಲ್ವರು ಆರೋಪಿಗಳನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರು, ಆಯುಧ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಎಲ್ಲ ಆರೋಪಿಗಳನ್ನು ಜಿಲ್ಲಾ ಕಾರಾಗೃಹಕ್ಕೆ ಬಿಡಲಾಗಿದೆ.