ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿಯಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 2022 ರಲ್ಲಿ ನಡೆದಿದ್ದ ದರೋಡೆ ಪ್ರಕರಣ ಬೇಧಿಸಿರುವ ಹೊಸಹಳ್ಳಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರಪ್ರದೇಶ ಮೂಲದ ಅಲಾಪುರ ನಿವಾಸಿ ಟ್ರಕ್ ಚಾಲಕ ಸರ್ತಾಜ್ (36) ಉಜಾನಿಯ ನಿವಾಸಿ ಕಾಳಿಚರಣ್ (32) ಗುಡ್ಡು ಅಲಿಯಾಸ್ ಕಾಲಿಯಾ (30), ಅಸ್ಲಾಂ (28) ಹಸ್ರತ್ ಅಲಿ (30) ಬಂಧಿತರು.
ಮುಖವಾಡ ಧರಿಸಿ ಬ್ಯಾಂಕ್‌ನಲ್ಲಿ ಚಿನ್ನಾಭರಣ ಹಾಗೂ ನಗದು ದೋಚಿದ ಆರೋಪದಲ್ಲಿ 2022ರಲ್ಲಿ ಅಂದಿನ ಸರ್ಕಲ್ ಇನ್‌ಸ್ೆಕ್ಟರ್ ಹರೀಶ್ ನೇತೃತ್ವದ ಪೊಲೀಸರು ಉತ್ತರ ಪ್ರದೇಶದ ಬದಾಯೂನ್ ಜಿಲ್ಲೆಯ ಅಲಾಪುರ್‌ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಹೊಸಹಳ್ಳಿ ಠಾಣೆ ಪೊಲೀಸ್ ಇನ್‌ಸ್ೆಕ್ಟರ್ ರಾವ್‌ಗಣೇಶ್ ಜನಾರ್ಧನ್ ನೇತೃತ್ವದ ತಂಡ ನಾಲ್ವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ 12 ಮಂದಿ ಭಾಗಿಯಾಗಿದ್ದರು ಎನ್ನಲಾಗಿದ್ದು ಇದೀಗ 7 ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ. ಇನ್ನು ಐವರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಲಾಕರ್ ಮುರಿದು ದರೋಡೆ: ಮುಖಕ್ಕೆ ಮುಖವಾಡ ಧರಿಸಿ ಬ್ಯಾಂಕ್‌ನೊಳಗೆ ನುಗ್ಗಿದ್ದ ದರೋಡೆಕೋರರ ತಂಡ ಗ್ಯಾಸ್ ಕಟರ್‌ನಿಂದ ಲಾಕರ್ ಮುರಿದು ಬರೋಬ್ಬರಿ 3.50 ಕೋಟಿ ರೂ. ಮೌಲ್ಯದ 5 ಕೆ.ಜಿ ಚಿನ್ನಾಭರಣ ಹಾಗೂ 15 ಲಕ್ಷ ರೂ.ನಗದು ದೋಚಿ ಪರಾರಿಯಾಗಿದ್ದರು.
ಬಂಧಿತ ಆರೋಪಿಗಳನ್ನು ಹೊಸಹಳ್ಳಿಯಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸ್ಥಳ ಮಹಜರು ಮಾಡಿಸಿ, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.