ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಸನಿಹದ ಪೂಚಕ್ಕಾಡ್ ನಿವಾಸಿ ಎಂ.ಸಿ ಅಬ್ದುಲ್ ಗಫೂರ್ ಹಾಜಿ (55)ಅವರನ್ನು ಕೊಲೆಗೈದು ದೋಚಿದ ಚಿನ್ನದಲ್ಲಿ ಒಟ್ಟು 129 ಪವನ್ ತನಿಖಾಧಿಕಾರಿಗಳು ವಶಪಡಿಸಿಕೊಡಿದ್ದಾರೆ. ಕಾಸರಗೋಡಿನ ಮೂರು ಜ್ಯುವೆಲ್ಲರಿಗಳಿಂದ ಹಾಗೂ ಚಟ್ಟಂಚಾಲಿನ ಸಹಕಾರಿ ಬ್ಯಾಂಕ್‌ನಿಂದ ಈ ಚಿನ್ನ ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಚಿನ್ನ ಮಾರಾಟ ಮಾಡಿದ ಹಾಗೂ ಅಡವಿರಿಸಿರುವ ಸಹಕಾರಿ ಬ್ಯಾಂಕಿನ ಬಗ್ಗೆ ಮಾಹಿತಿ ನೀಡಿದ್ದರು.
ಒಟ್ಟು 596 ಪವನು(4.76ಕಿ.ಗ್ರಾಂ) ಚಿನ್ನ ದೋಚಲಾಗಿದ್ದು, ಈ ಚಿನ್ನ ಪತ್ತೆಹಚ್ಚುವ ನಿಟ್ಟಿನಲ್ಲಿ ಆರೋಪಿಗಳನ್ನು ಹತ್ತು ದಿವಸಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಕಾಸರಗೋಡು ಡಿಸಿಆರ್‌ಬಿ ಡಿವೈಎಸ್‌ಪಿ ಕೆ.ಜೆ ಜಾನ್ಸನ್ ಹೊಸದುರ್ಗ ಜ್ಯುಡಿಶಿಯಲ್ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರೂ, ಮೂರು ದಿವಸಗಳ ಕಾಲ ಮಾತ್ರ ಪೊಲೀಸರ ವಶಕ್ಕೊಪ್ಪಿಸಲಾಗಿತ್ತು. ಪೊಲೀಸ್ ಕಸ್ಟಡಿ ಬುಧವಾರಕ್ಕೆ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮತ್ತೆ ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತಷ್ಟು ಚಿನ್ನ ಪತ್ತೆಹಚ್ಚಲು ಬಾಕಿಯಿರುವುದರಿಂದ ಮತ್ತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು ಎಂಬುದಾಗಿ ಡಿವೈಎಸ್‌ಪಿ ಕೆ.ಜೆ ಜಾನ್ಸನ್ ತಿಳಿಸಿದ್ದಾರೆ.
ಎಂ.ಸಿ ಅಬ್ದುಲ್ ಗಫೂರ್ ಹಾಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಕುಳಿಕುನ್ನುವಿನ ಮಹಿಳಾ ಮಂತ್ರವಾದಿ ಶಮೀಮಾ ಯಾನೆ ಜಿನ್ನುಮ್ಮ (38), ಪತಿ ಉಬೈದ್ (40), ಪೂಚಕ್ಕಾಡ್ ನಿವಾಸಿ ಅನ್ಸಿಫಾ (34) ಮತ್ತು ಮಧೂರಿನ ಆಯಿಷಾ (40) ಎಂಬುವರನ್ನು ಬಂಧಿಸಲಾಗಿದೆ.