ಗುಂಡ್ಲುಪೇಟೆ : ವನ್ಯಜೀವಿಗಳನ್ನು ಕಳ್ಳಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಲು ಸಮೇತ ಬಂಧಿಸಿದ್ದಾರೆ. ತಾಲೂಕಿನ ಹಕ್ಕಲಪುರ ಕೆರೆಯ ಬಳಿ ಸೋಮವಾರ ನಸುಕಿನಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಬನ್ನೀತಾಳಪುರ ಗ್ರಾಮದ ಮಹದೇವ ಶೆಟ್ಟಿ(50) ಮತ್ತು ಮಾರಶೆಟ್ಟಿ(50) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಾದ ಗೋಪಾಲಯ್ಯ, ಕರಿಯಶೆಟ್ಟಿ ಹಾಗೂ ಮಹೇಶ್ ಪರಾರಿಯಾಗಿದ್ದಾರೆ. ಬಂಧಿತರಿಂದ ಮೂರು ಮೃತ ಕಾಡುಬೆಕ್ಕುಗಳು, ನಾಲ್ಕು ಜೀವಂತ ಮೊಲಗಳನ್ನು ವಶಕ್ಕೆ ಪಡೆದು ಪಟ್ಟಣದ ಬಫರ್ ವಲಯಾರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಹಲವು ದಿನಗಳಿಂದ ಕಳ್ಳಬೇಟೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್ ಕುಮಾರ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್‌ಟಿಪಿಎಫ್‌ನ ಆರ್‌ಎಫ್‌ಒ ನವೀನ್ ಕುಮಾರ್, ಮೂಲೆಹೊಳೆ ಆರ್‌ಎಫ್‌ಒ ನರೇಶ್, ಉಪ ವಲಯಾರಣ್ಯಾಧಿಕಾರಿಗಳಾದ ಕಿರಣ್ ಕುಮಾರ್, ರಮೇಶ್ ಎಸ್.ಮಠಪತಿ, ಸಿದ್ದಹರಿ, ಸಿಬ್ಬಂದಿ ಕುಮಾರ್, ಕರಿಗೌಡ, ಬಸವೇಗೌಡ, ಸುರೇಶ್ ಇತರರು ಭಾಗವಹಿಸಿದ್ದರು.