ಸವಣೂರ: ದೇಶ ವಿದೇಶದಲ್ಲಿ ಕನ್ನಡದ ಕಹಳೆ ಮೊಳಗಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸವಣೂರಿನ ಸುಪುತ್ರ ಡಾ. ವಿ.ಕೃ. ಗೋಕಾಕ ಅವರ ಕುರಿತು ತಾಲೂಕಿನಲ್ಲಿ ಪ್ರಚಾರ ಇಲ್ಲದಿರುವದು ವಿಷಾದನೀಯ ಎಂದು ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಡಿ.ಎನ್.ಗುಂಜಳ ತಿಳಿಸಿದರು.
ಡಾ. ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ), ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಹಯೋಗದಲ್ಲಿ ಪಟ್ಟಣದ ಡಾ. ವಿ.ಕೃ.ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಡಾ. ವಿ.ಕೃ.ಗೋಕಾಕ ಅವರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಥಳೀಯ ವಿದ್ಯಾರ್ಥಿಗಳಿಗೆ, ಸಾಹಿತ್ಯಾಸಕ್ತರಿಗೆ ಗೋಕಾಕರ ಜೀವನ ಅಧ್ಯಯನ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕಿದೆ. ನಿರಂತರ ಸಾಹಿತ್ತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಗೋಕಾರರ ಸ್ಮರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಚಿಂತನೆಗೆ ಸೂಕ್ತ ವೇದಿಕೆ ಕಲ್ಪಿಸುವದು ಅವಶ್ಯವಾಗಿದೆ ಎಂದರು.
ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಸಮಾರಂಭ ಉದ್ಘಾಟಿಸಿದರು. ಪ್ರಾಧ್ಯಾಪಕ ಆನಂದ ಇಂದೂರ ಉಪನ್ಯಾಸ ನೀಡಿದರು.
ತಹಸೀಲ್ದಾರ್ ಗಣೇಶ ಸವಣೂರ, ಪುರಸಭೆ ಮುಖ್ಯಾಧಿಕಾರಿ ಎಂ.ಬಿ.ದೊಡ್ಡಣ್ಣನವರ, ಡಾ. ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯರಾದ ಸತೀಶ ಕುಲಕರ್ಣಿ, ಮಲ್ಲಾರಪ್ಪ ತಳ್ಳಿಹಳ್ಳಿ, ಮಂಜುಳಾ ರಾಶಿನಕರ, ಕಾರ್ಯದರ್ಶಿ ಸಿದ್ದಲಿಂಗೇಶ ರಂಗಣ್ಣನವರ, ಪಿಎಸ್ಐ ಮೇಘರಾಜ ದೊಡ್ಡಮನಿ, ಕಸಾಪ ಪದಾಧಿಕಾರಿಗಳಾದ ಪ್ರಭು ಅರಗೋಳ, ವಿ.ಎಸ್.ಹಾವಣಗಿ, ವಿ.ಎನ್.ತಿಪ್ಪನಗೌಡ್ರ, ಕನ್ನಡಪರ ಸಂಘಟನೆಯ ಪದಾಧಿಕಾರಿಗಳಾದ ಪರಶುರಾಮ ಈಳಗೇರ, ರಾಮಣ್ಣ ಅಗಸರ ಹಾಗೂ ಇತರರು ಪಾಲ್ಗೊಂಡಿದ್ದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಿ.ಎನ್.ಪಾಟೀಲ ಹಾಗೂ ಎಸ್.ವಿ.ಕೋಳಿವಾಡ ಕಾರ್ಯಕ್ರಮ ನಿರ್ವಹಿಸಿದರು.