ಜಿಲ್ಲೆ

ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ, ಜಿಪಂ ಅಧ್ಯಕ್ಷೆ ಜಯಮ್ಮ ಸಲಹೆ, ಜಿಲ್ಲಾಮಟ್ಟದ ಕ್ರೀಡಾಕೂಟ

Bengaluru Rural

ಬೆಂಗಳೂರು: ಮಾನಸಿಕ ಸ್ಥೈರ್ಯ, ದೈಹಿಕ ಸಾಮರ್ಥ್ಯ ವೃದ್ಧಿ ಹಾಗೂ ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಾತನಾಡಿದರು.

ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಕ್ರೀಡಾಕೂಟ ಉತ್ತಮ ವೇದಿಕೆ ಕಲ್ಪಿಸಿದೆ.

ಮುಂದಿನ ದಿನಗಳಲ್ಲಿ ಇಂಥ ಕಾರ್ಯಕ್ರಮ ಹೆಚ್ಚು ಆಯೋಜನೆಯಾಗಬೇಕು, ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸಬೇಕು ಎಂದು ಆಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯ. ವಯಸ್ಸಿನ ಭೇದವಿಲ್ಲದೆ ಎಲ್ಲರೂ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡೆಗಳಿಂದ ಜೀವನದಲ್ಲಿ ಉತ್ಸಾಹ ಮೂಡುತ್ತದೆ. ನಾವು ಮಾಡುವ ಕೆಲಸ, ಕಾರ್ಯಗಳು ಸುಲಲಿತವಾಗಿ ನಡೆಯುತ್ತವೆ. ಒಗ್ಗಟ್ಟು, ಸಾಂಕ ಹೋರಾಟ ಮತ್ತಿತರ ಮನೋಭಾವನೆಗೆ ಕ್ರೀಡೆ ಸಹಕಾರಿ ಎಂದರು.

ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲೇಪುರ ಜಿ.ಲಕ್ಮೀನಾರಾಯಣ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಧಮ್ಮ, ಅನಂತಕುಮಾರಿ, ದೇವನಹಳ್ಳಿ ತಾಪಂ ಅಧ್ಯಕ್ಷೆ ಚೈತ್ರಾ ವೀರೇಗೌಡ, ಜಿಪಂ ಉಪ ಕಾರ್ಯದರ್ಶಿ ಕರಿಯಪ್ಪ, ಮುಖ್ಯ ಯೋಜನಾಧಿಕಾರಿ ವಿನುತಾರಾಣಿ ಮತ್ತಿತರರು ಇದ್ದರು.

ಅಧ್ಯಕ್ಷರ ಮೇಲುಗೈ!: ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡ ಜಿಪಂ ಅಧ್ಯಕ್ಷೆ ಜಯಮ್ಮ ಗಮನ ಸೆಳೆದರು. ಲೆಮೆನ್ ಮತ್ತು ಸ್ಪೂನ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಚಪ್ಪಾಳೆ ಗಿಟ್ಟಿಸಿದರು. 50 ಮೀಟರ್ ನಡಿಗೆ, ಗುಂಡು ಎಸೆತ, ಮ್ಯೂಸಿಕಲ್ ಚೇರ್, ಲೋಟ ಅನುಕ್ರಮವಾಗಿ ಹೊಂದಿಸುವುದು ಮತ್ತಿತರ ಸ್ಪರ್ಧೆಗಳಲ್ಲಿ ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಹಾಗೂ ಇತರ ಸದಸ್ಯರು ಅತ್ಯುತ್ಸಾಹದಿಂದ ಪಾಲ್ಗೊಂಡು ಸ್ಪರ್ಧಿಗಳಿಗೆ ಪೈಪೋಟಿ ನೀಡಿದ್ದು ಗಮನ ಸೆಳೆಯಿತು.

ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ನನ್ನ ಬಾಲ್ಯದ ದಿನ ನೆನಪಿಸಿತು, ಬಾಲ್ಯದ ದಿನಗಳಲ್ಲಿ ಇಂಥ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂತಸ ಪಡುತ್ತಿದ್ದೆವು. ಪ್ರಸ್ತುತ ಕರ್ತವ್ಯದ ಒತ್ತಡದಿಂದ ಸಾಧ್ಯವಾಗುತ್ತಿಲ್ಲ. ಈ ಕಾರ್ಯಕ್ರಮದ ಮೂಲಕ ಬಾಲ್ಯದ ನೆನಪು ಮರುಕಳಿಸಿದಂತಾಯಿತು. ಜಯಮ್ಮಲಕ್ಷ್ಮೀನಾರಾಯಣ, ಜಿಪಂ ಅಧ್ಯಕ್ಷೆ ದಿನನಿತ್ಯದ ಕರ್ತವ್ಯಗಳ ನಡುವೆ ಕ್ರೀಡೆಗಳಿಗೂ ಸ್ವಲ್ಪ ಸಮಯ ಮೀಸಲಿಡಬೇಕು, ಆರೋಗ್ಯವೃಧ್ದಿಯೊಂದಿಗೆ ದೈಹಿಕ ಹಾಗೂ ಮಾನಸಿಕ ಹುರುಪಿಗೆ ಕ್ರೀಡೆಗಳು ಪೂರಕವಾಗಿವೆ. ಇಂಥ ಕಾರ್ಯಕ್ರಮಗಳು ನಮ್ಮ ಕೆಲಸಕಾರ್ಯಗಳಿಗೆ ಮತ್ತಷ್ಟು ಹುರುಪು ತುಂಬುತ್ತವೆ. ಕನ್ಯಾಕುಮಾರಿಶ್ರೀನಿವಾಸ್, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ