ಜಿಲ್ಲೆ

ಜನರಿಗೆ ಸಮಪರ್ಕವಾಗಿ ಆರೋಗ್ಯ ಸೇವೆ ಒದಗಿಸಬೇಕು: ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ

ಪಂಕಜ ಕೆ.ಎಂ.

ಬೆಂಗಳೂರು: ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಗುರುವಾರ ಇಲಾಖೆಯ ಉಪನಿರ್ದೇಶಕರು ಹಾಗೂ ಕಾರ್ಯಕ್ರಮ ಅಧಿಕಾರಿಗಳೊಂದಿಗೆ ವಿಸ್ತೃತ ಸಭೆ ನಡೆಸಿದ ಸಚಿವರು, ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಜಾರಿಯಲ್ಲಿರುವ ಆರೋಗ್ಯ ಸೇವೆಗಳು ಹೆಚ್ಚು ಪ್ರಗತಿ ಕಂಡಿಲ್ಲ. ಬಹಳಷ್ಟು ಸೇವೆಗಳು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಂಡಿಲ್ಲ. ಕಳೆದ ವರ್ಷದ ಅವಧಿಯಲ್ಲಿ ಹಲವು ಬಿಲ್ ಗಳು ಪಾವತಿಯಾಗದೇ ಬಾಕಿ ಇರಿಸಿಕೊಂಡಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದೇ ವೇಳೆ ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ದೊರೆಯುವ ಅನುದಾನವನ್ನ ಸಮರ್ಪಕವಾಗಿ ಬಳಿಸಿಕೊಂಡಿಲ್ಲ ಎಂದಾದರೆ, ಆರೋಗ್ಯ ಸೇವೆಗಳು ಸಮರ್ಪಕವಾಗಿ ತಲುಪಲು ಹೇಗೆ ಸಾಧ್ಯ ಎಂದು ಅವರು, ಲಭ್ಯವಿರುವ ಹಣಕಾಸನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡದಿದ್ದರೆ ಏನು ಪ್ರಯೋಜನ ಎಂದು ಬೇಸರಗೊಂಡರು.

ಶಿಸ್ತು ಕ್ರಮದ ಎಚ್ಚರಿಕೆ: ಟೆಂಡರ್ ಪ್ರಕ್ರಿಯೆಗಳನ್ನ ಮಾರ್ಚ್ ತಿಂಗಳ ವರೆಗೇ ಏಕೆ ವಿಸ್ತರಿಸುತ್ತಿದ್ದೀರಿ, ಇಲಾಖೆಯ ಯಾವ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯಾರ ಮುಲಾಜು ನನಗಿಲ್ಲ, ಯಾರ ಒತ್ತಡದಿಂದಲೂ ಅಧಿಕಾರಿಗಳನ್ನು ನೇಮಿಸಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಜವಾಬ್ದಾರಿಗಳನ್ನು ನೀಡಲಾಗಿದೆ. ಹಾಗಾಗಿ ಯಾರು ಕಾರ್ಯದಕ್ಷತೆ ತೋರುವುದಿಲ್ಲವೋ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಸಭೆ: ಇದೇ ವೇಳೆ ಜಿಲ್ಲಾ ಆತ್ರೆಗಳಲ್ಲಿ ಕಾರ್ಯವೈಖರಿಗಳು, ಇ - ಆಫೀಸ್, ಟೆಲಿ ಐಸಿಯು, ಆಯುಷ್ಮಾನ್ ಭಾರತ್ ಯೋಜನೆಯ ರೆಫರೆಲ್ ಪದ್ದತಿಗಳ ಬಗ್ಗೆ ಚರ್ಚಿಸಲು ಸಭೆ ಆಯೋಜಿಸುವಂತೆ ಸಚಿವರು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಎನ್‌ಎಚ್‌ಎಮ್ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಸೇರಿ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.