ಜಿಲ್ಲೆ

ಗೂಂಡಾ ರಾಜ್ಯವಾಗುತ್ತಿರುವ ಕರ್ನಾಟಕ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಆಗುವ ಮೊದಲು ಇದ್ದ ಮಾದರಿಯಂತೆ ಕರ್ನಾಟಕವೂ ಗೂಂಡಾ ರಾಜ್ಯವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಳವಳ ವ್ಯಕ್ತಪಡಿಸಿದ್ದಾರೆ.

ಹತ್ಯೆಗೀಡಾದ ಅಂಜಲಿಯ ಇಲ್ಲಿನ ವೀರಾಪುರ ಓಣಿಯ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೆಟ್ಟರ್, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಆದ ನಂತರ ಉತ್ತರ ಪ್ರದೇಶದಲ್ಲಿ ಗೂಂಡಾಗಿರಿಗೆ ಪೂರ್ಣವಿರಾಮ ಬಿದ್ದಿತು. ನಂತರದ ದಿನಗಳಲ್ಲಿ ಆ ರಾಜ್ಯದಲ್ಲಿ ಶಾಂತಿ ನೆಲೆಸಿತು. ಅಂತಹ ನಿರ್ಧಾರವನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ ಏಕೆ ತೆಗೆದುಕೊಳ್ಳುತ್ತಿಲ್ಲ ? ಎಂದು ಪ್ರಶ್ನಿಸಿದರು.

ಗೃಹ ಇಲಾಖೆಯ ನಿರ್ಲಕ್ಷ್ಯದಿಂದಲೇ ರಾಜ್ಯದಲ್ಲಿ ಅಶಾಂತಿ, ಆತಂಕದ ವಾತಾವರಣ ನಿರ್ವಣಗೊಂಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಗೃಹ ಸಚಿವರು ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಬೇಕಿತ್ತು. ನೇಹಾ ಹಿರೇಮಠಳ ಹತ್ಯೆ ನಡೆದಾಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು ಎಂದರು.

ಕೊಲೆ, ಸುಲಿಗೆ, ಅತ್ಯಾಚಾರ ಹೆಚ್ಚುತ್ತಿದ್ದರೂ ಕಾಂಗ್ರೆಸ್ ಸರ್ಕಾರ ತನ್ನ ನಿರ್ಲಕ್ಷ್ಯತನ ಮುಂದುವರೆಸಿದೆ. ಅಂಜಲಿ ಹತ್ಯೆ ನಡೆಯುವ ಮೊದಲೇ ಆಕೆ ಕುಟುಂಬದವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರೂ, ಪೊಲೀಸರು ಅಗತ್ಯ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆ ಮೇಲೆ ಸರ್ಕಾರ ನಿಯಂತ್ರಣ ಕಳೆದುಕೊಂಡಿದೆ. ಹೀಗಾಗಿ, ಕರ್ನಾಟಕ ಗೂಂಡಾ ರಾಜ್ಯ ಆಗುತ್ತಿದೆ ಎಂದು ದೂರಿದರು.