ಜಿಲ್ಲೆ

ದುರ್ಗಾಮಾತಾ ದೌಡ್​ನಲ್ಲಿ ಸೇನಾಧಿಕಾರಿಗಳು ಭಾಗಿ

ಬೆಳಗಾವಿ: ನವರಾತ್ರಿ ಪ್ರಯುಕ್ತ ನಗರದಲ್ಲಿ ನಡೆಯುತ್ತಿರುವ 27ನೇ ವರ್ಷದ ದುರ್ಗಾಮಾತಾ ದೌಡ್​ನಲ್ಲಿ ಮೂರನೇ ದಿನವಾದ ಬುಧವಾರ ಸೇನಾಧಿಕಾರಿಗಳು ಪಾಲ್ಗೊಂಡು, ದೌಡ್​ಗೆ ವಿಶೇಷ ಮೆರಗು ತಂದರು.

ನಗರದ ಮಿಲಿಟರಿ ಮಹಾದೇವಿ ಮಂದಿರದಿಂದ ಆರಂಭಗೊಂಡ ದೌಡ್​ಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಮರಾಠಾ ಲು ಪದಾತಿದಳದ ಕಮಾಂಡೆಂಟ್​ ಬ್ರಿಗೇಡಿಯರ್​ ಜಾಯದೀಪ್​ ಮುಖರ್ಜಿ ಮತ್ತು ಸುಬೇದಾರ ಮೇಜರ್​ ಸಂದೀಪ ಖೋತ್​ ಚಾಲನೆ ನೀಡಿ, ಧ್ವಜ ಹಿಡಿದು ಸ್ವಲ್ಪ ದೂರ ಓಟದಲ್ಲಿ ಸಾಂಕೇತಿಕವಾಗಿ ಪಾಲ್ಗೊಂಡರು.

ಬಳಿಕ ಓಟವು ಛತ್ರಪತಿ ಶಿವಾಜಿ ಮಾರ್ಗ(ಹೈ ಸ್ಟ್ರೀಟ್​), ಕ್ಯಾಂಪ್​ ಪ್ರಮುಖ ಬೀದಿಗಳು, ಕೊಂಡಪ್ಪ ಸ್ಟ್ರೀಟ್​, ಫಿಶ್​ ಮಾರ್ಕೆಟ್​, ತೆಲಗು ಕಾಲನಿ, ಶ್ರೀ ಶಂಭು ತೀರ್ಥ ಮಾರ್ಗ ಮೂಲಕ ಸಂಚರಿಸಿ ಜತ್ತಿಮಠ ಬಳಿ ಸಮಾರೋಪಗೊಂಡಿತು.

ಭಾವೈಕ್ಯತೆಯ ಸ್ವಾಗತ: ಕ್ಯಾಂಪ್​ ಪ್ರದೇಶದಲ್ಲಿ ಭಾವೈಕ್ಯತೆಯ ಸ್ವಾಗತ ಲಭಿಸಿತು. ಮುಸ್ಲಿಂ ಸಮುದಾಯದ ಪರವಾಗಿ ಸಾಜಿದ್​ ಶೇಖ್​ ಮತ್ತು ಗೆಳೆಯರು, ದೌಡನ್ನು ತಮ್ಮ ಬಡಾವಣೆಗೆ ಸ್ವಾಗತಿಸಿಕೊಂಡು ಭಾವೈಕ್ಯತೆಗೆ ಬೆಳಗಾವಿ ಸಾಕ್ಷಿಯಾಗಬೇಕಿದೆ. ನಾವೆಲ್ಲರೂ ಒಂದಾಗಿ ಪರಸ್ಪರ ಹಬ್ಬ ಆಚರಿಸಬೇಕಿದೆ ಎಂಬ ಸಂದೇಶ ಸಾರಿದರು. ದೌಡ್​ನಲ್ಲಿ ಸಾಗುತ್ತಿದ್ದ ಯುವಕ, ಯವತಿಯರಿಗೆ ಪಾನೀಯ ಮತ್ತು ಬಾಳೆಹಣ್ಣು ವಿತರಿಸಿದರು.