ಜಿಲ್ಲೆ

ಸೇನಾ ಕಮಾಂಡರ್ ನಿಧನ | ಅಂತ್ಯಕ್ರಿಯೆಗಾಗಿ ದೆಹಲಿಯಿಂದ ನಗರಕ್ಕೆ ಕಾರಿನಲ್ಲೇ ಆಗಮಿಸಿದ ವೃದ್ಧ ಪಾಲಕರು

ಬೆಂಗಳೂರು: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಭಾರತೀಯ ವಿಶೇಷ ಪಡೆಗಳ ಕಮಾಂಡರ್ ಕರ್ನಲ್ ನವಜೋತ್ ಸಿಂಗ್ ಬಾಲ್ (39) ನಿಧನರಾಗಿದ್ದು, ಅವರ ಅಂತಿಮ ಸಂಸ್ಕಾರ ನಡೆಸಲು ಪಾಲಕರು ದೆಹಲಿಯಿಂದ ಕಾರಿನಲ್ಲಿ 2,600 ಕಿ.ಮೀ. ಪ್ರಯಾಣಿಸಿ ನಗರಕ್ಕೆ ಬಂದಿದ್ದಾರೆ.

ಯೋಧ ನವಜೋತ್ ಸಿಂಗ್ ಅವರ ತಂದೆ, ತಾಯಿ, ಸಹೋದರ ಹಾಗೂ ಕಾರು ಚಾಲಕ ಮಾತ್ರ ಬಂದಿದ್ದು, ಸೋಮವಾರ (ಏ.13) ಪಾರ್ಥಿವ ಶರೀರಕ್ಕೆ ಸೇನಾಗೌರವ ಹಾಗೂ ವಂದನೆ ಸಲ್ಲಿಸಲಾಗುವುದು. ಬಳಿಕ ಅಂತಿಮ ಸಂಸ್ಕಾರ ವಿಧಿವಿಧಾನ ನೆರವೇರಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.

ಕರ್ನಲ್ ನವಜೋತ್ ಸಿಂಗ್ ಸೇನೆಯ ಎಲೈಟ್ 2 ಪ್ಯಾರಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪತ್ನಿ ಆರತಿ ಹಾಗೂ ಪುತ್ರರಾದ ಜೊರವರ್ ಮತ್ತು ಸರ್ಬಾಜ್ ಜತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಸೇನಾ ಪಡೆಗಳ ವಿಶಿಷ್ಟ ಸೇವಾ ಪದಕಗಳ ಪೈಕಿ 3ನೇ ಅತಿ ದೊಡ್ಡ ಶೌರ್ಯ ಪ್ರಶಸ್ತಿ ಪಡೆದಿರುವ ನವಜೋತ್ ಸಿಂಗ್, ಶ್ರೇಷ್ಠತೆಯನ್ನು ಗಳಿಸಿದ್ದರು.

2 ವರ್ಷಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ನಗರದ ಏರ್​ಫೋರ್ಸ್ ಕಮಾಂಡೊ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ (ಏ.9) ನಿಧನರಾದರು. ಈ ವಿಚಾರವನ್ನು ದೆಹಲಿಯಲ್ಲಿರುವ ನವಜೋತ್ ಅವರ ಪಾಲಕರಿಗೆ ತಿಳಿಸಲಾಗಿತ್ತು.

ಅಲ್ಲದೆ, ಪಾರ್ಥಿವ ಶರೀರವನ್ನು ಸೇನೆಯ ವಿಮಾನದಲ್ಲಿ ದೆಹಲಿಗೆ ತೆಗೆದುಕೊಂಡು ಹೋಗಿ ಗೌರವವಂದನೆ ಸಲ್ಲಿಸಿ ಅಂತಿಮ ಸಂಸ್ಕಾರ ನಡೆಸಲು ಸೇನಾಧಿಕಾರಿಗಳು ನಿರ್ಧರಿಸಿದ್ದರು. ಆದರೆ, ಅವರ ಪಾಲಕರು ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ನಡೆಸಬೇಕು ಎಂಬ ಇಚ್ಛೆ ಹೊಂದಿದ್ದರು. ಅದಕ್ಕಾಗಿ ನಾವೇ ಬೆಂಗಳೂರಿಗೆ ಬರುತ್ತೇವೆ ಎಂದು ಸೇನೆಗೆ ತಿಳಿಸಿದ್ದರು.

ಅಧಿಕಾರಿಗಳ ಗೊಂದಲ: ನವಜೋತ್ ಸಿಂಗ್ ಪಾಲಕರನ್ನು ದೆಹಲಿಯಿಂದ ಸೇನಾ ವಿಮಾನದಲ್ಲಿ ಬೆಂಗಳೂರಿಗೆ ಕಳುಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಗೆ ನೀಡಿದ್ದರು. ಆದರೆ, ಸೇನಾಧಿಕಾರಿಗಳು, ವಾಯುಸೇನೆ ಹಾಗೂ ಸೇನಾ ವಿಮಾನಗಳ ಕಾರ್ಯಾಚರಣೆ ವಿಚಾರದಲ್ಲಿ ಗೊಂದಲ ಉಂಟಾಗಿ, ನವಜೋತ್ ಪಾಲಕರನ್ನು ವಿಮಾನದಲ್ಲಿ ಬೆಂಗಳೂರಿಗೆ ಕರೆತರಲು ಸಾಧ್ಯವಾಗಲಿಲ್ಲ. ಏ.9ರಿಂದ ಪ್ರಯಾಣ ಬೆಳೆಸಿ ಶನಿವಾರ (ಏ.11) ತಡರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಪಾಲಕರನ್ನು ಕರೆತರಲು ವಿಮಾನ ಕಲ್ಪಿಸದ ಸೇನಾಧಿಕಾರಿಗಳ ನಡೆಗೆ ನಿವೃತ್ತ ಸೇನಾಧಿಕಾರಿಗಳಿಂದ ಬೇಸರ ವ್ಯಕ್ತವಾಗಿದೆ.