ಜಿಲ್ಲೆ

ಭಾರತೀಯ ಸೈನ್ಯದ ಶೌರ್ಯ ಅಪ್ರತಿಮ

ಶಂಕರ ಗೆಜ್ಜಿ

ಬೆಳಗಾವಿ: ಭಾರತೀಯ ಸೈನ್ಯದ ವೀರ ಗಾಥೆಯ ಕುರಿತು ಶತ್ರು ಪಾಳಯ ದಲ್ಲೂ ಚರ್ಚೆಯಾಗುತ್ತವೆ. ಭಾರತೀಯ ಸೈನ್ಯದ ಶೌರ್ಯ ಅಪ್ರತಿಮವಾಗಿದೆ ಎಂದು ಸೇನಾ ಮೆಡಲ್ ಪುರಸ್ಕೃತ ಕರ್ನಲ್ ಶ್ಯಾಮ್ ವಿಜಯಸಿಂಹ ಹೇಳಿದರು.

ನಗರದ ಐಎಂಇಆರ್ ಕಾಲೇಜಿನಲ್ಲಿ ಪ್ರಬುದ್ಧ ಭಾರತ ಮತ್ತು ಫಿನ್ಸ್ (ಫೋರಮ್ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯೂರಿಟಿ) ಸಹಯೋಗದಲ್ಲಿ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಈಚೆಗೆ ಆಯೋಜಿಸಿದ್ದ ಕಾರ್ಗಿಲ್ ಯುದ್ಧ ಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಈ ಮೂರೂ ದಳಗಳ ಸೈನಿಕರು ವಿಶ್ವದ ಎಲ್ಲ ರಾಷ್ಟ್ರಗಳ ಸೈನ್ಯಕ್ಕೆ ನಡುಕು ಹುಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ. ಮೊದಲ ಮತ್ತು ಎರಡನೇ ವಿಶ್ವಯುದ್ಧದಲ್ಲಿ ಕೂಡ ಮಿತ್ರರಾಷ್ಟ್ರಗಳ ಗೆಲುವಿನಲ್ಲಿ ಭಾರತೀಯ ಸೈನಿಕರ ಪಾತ್ರ ಅನನ್ಯವಾಗಿದೆ ಎಂದರು.

ನಂತರ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಬಳಸಿ, ಹತ್ತು ಹಲವು ಚಿತ್ರಗಳನ್ನೊಳಗೊಂಡ ಕರ್ನಲ್ ವಿಜಯಸಿಂಹ ಅವರ ವ್ಯಾಖ್ಯಾನವು ಕಾರ್ಗಿಲ್ ಯುದ್ಧ ಪ್ರದೇಶದ ವಸ್ತುಸ್ಥಿತಿ ಹಾಗೂ ಯುದ್ಧದ ಕ್ಲಿಷ್ಟ್ಟತೆ ಸಭಿಕರಿಗೆ ಕಣ್ಣಿಗೆ ಕಟ್ಟುವಂತೆ ಅನಾವರಣಗೊಂಡಿತು.

ಎಂಎಲ್‌ಐಆರ್‌ಸಿಯ ಬ್ರಿಗೇಡಿಯರ್ ಜಯದೀಪ ಮುಖರ್ಜಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಎದುರಾದ ಸವಾಲುಗಳನ್ನು ಮೆಲುಕು ಹಾಕಿದರು.
ಫೀನ್ಸ್ ಸದಸ್ಯ ಕರ್ನಲ್ ಮಧುಕರ ಕದಮ್ ಮಾತನಾಡಿ, ಯುದ್ಧ ಸನ್ನಿವೇಶ, ಕಾರ್ಗಿಲ್ ಭೂಗೋಳ ಹಾಗೂ ಸೇನೆಯ ಮುಂದಿದ್ದ ಸವಾಲುಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಎಂಎಲ್‌ಆರ್‌ಐಸಿಯ ಸೈನ್ಯದ ಅಧಿಕಾರಿಗಳು ಇದ್ದರು.

ಡಾ. ವೈಭವ ಬಾಡಗಿ ನಿರೂಪಿಸಿದರು. ಶ್ರೇಯಾ ಅವರು ವಂದೇಮಾತರಂ ಗೀತೆ ಪ್ರಸ್ತುತಪಡಿಸಿದರು. ಆನಂದ ಭುಕ್ಕೆಬಾಗ ವಂದಿಸಿದರು.