ವಿರಾಜಪೇಟೆ: ತಮ್ಮ ದೈಹಿಕ ಸಾಮರ್ಥ್ಯವನ್ನು ತೋಳು ಬಲದ ಮೂಲಕ ಸಾಬೀತು ಮಾಡುವ ವಿನೂತನ ಕ್ರೀಡೆಯನ್ನು ಜಿಲ್ಲೆಯಲ್ಲಿ ಬೆಳೆಸಲು ಏಕ್ ಭಾರತ್ ಅಭಿಯಾನ್ ಸಂಸ್ಥೆ ಮುಂದಾಗಿದ್ದು, ಮೇ ತಿಂಗಳಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಂಸ್ಥೆ ಸಂಸ್ಥಾಪಕ ಡಾ.ಜೋಯಪ್ಪ ತಿಳಿಸಿದರು.
ಸಂಸ್ಥೆಯ ಜಿಲ್ಲಾ ಘಟಕದಿಂದ ಗೋಣಿಕೊಪ್ಪಲು ಪಟ್ಟಣದ ಕಚೇರಿಯಲ್ಲಿ ಮಂಗಳವಾರ ತೋಳು ಬಲ ಕುಸ್ತಿ ಕ್ರೀಡೆಯ ಪೋಸ್ಟರ್ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಏಕ್ ಭಾರತ್ ಅಭಿಯಾನ ಆಂದೋಲನದ ಮೂಲಕ ದೇಶದಾದ್ಯಂತ ರಾಷ್ಟ್ರ ಗೀತೆಯ ಸಾರ, ಮೌಲ್ಯ ಮತ್ತು ಪದಗಳ ಅರ್ಥವನ್ನು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಅನೇಕ ಕ್ರೀಡೆಗಳನ್ನು ಗೌರವಿಸಿ ಪ್ರೋತ್ಸಾಹಿಸಿ ಇದೀಗ ಚಾಲ್ತಿಯಲ್ಲಿದೆ. ಈ ನಿಟ್ಟಿನಲ್ಲಿ ಆರ್ಮ್ ರೆಸ್ಲಿಂಗ್ ಕ್ರೀಡೆಯನ್ನು ಜನಪ್ರಿಯಗೊಳಿಸುವ ಉದ್ದೇಶದಲ್ಲಿ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ. ಇದಕ್ಕೆ ಜಿಲ್ಲೆಯ ಜನರ ಪ್ರೋತ್ಸಾಹ ಬೇಕಿದೆ ಎಂದರು.
ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ರಾಜೇಶ್ ಮಾತನಾಡಿ, ಕೆಲವು ಕ್ರೀಡೆಗಳು ಅಲ್ಪ ಸಮಯದಲ್ಲಿ ಖ್ಯಾತಿಗೊಂಡು ಬಳಿಕ ಅಗತ್ಯ ಪ್ರೋತ್ಸಾಹ ಸಿಗದೆ ಕಣ್ಮರೆಯಾಗುತ್ತಿವೆ. ಅಂಥಹ ಕ್ರೀಡೆಗಳಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಆರ್ಮ್ ರೆಸ್ಲಿಂಗ್ ಕ್ರೀಡೆಯನ್ನು ಕರ್ನಾಟಕ ಆರ್ಮ್ಸ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ಮೇ 11ರಂದು ಚಾಂಪಿಯನ್‌ಶಿಪ್ ಪಂದ್ಯ ನಡೆಯಲಿವೆ ಎಂದು ವಿವರಿಸಿದರು.
ಪುರುಷರು, ಮಹಿಳೆಯರು, 18 ವರ್ಷದೊಳಗಿನ ಮಕ್ಕಳು ಹಾಗೂ ವಿಶೇಷಚೇತನರ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9 ರಿಂದ ಸಂಜೆ 6ವರೆಗೆ ಸ್ಪರ್ಧೆ ನಡೆಯಲಿದೆ. ಆಸಕ್ತರು ಆನ್‌ಲೈನ್ ಮೂಲಕ ಅಥವಾ ಸ್ಪರ್ಧೆ ನಡೆಯುವ ದಿನದಂದು ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ 250 ರೂ. ದರ ನಿಗದಿಗೊಳಿಸಲಾಗಿದೆ. ಪ್ರತಿ ಸ್ಪರ್ಧಿಗೆ ಪ್ರಮಾಣ ಪತ್ರ ಹಾಗೂ ಪದಕ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಫಿಟ್ನೆಸ್ಸ್ ಮಂತ್ರ ಜಿಮ್ ಮಾಲೀಕ ಪಿ.ಎಚ್. ರಫೀಕ್ ಮತ್ತು ಬುಲ್ಸ್ ಕಿಂಗ್‌ಡಂ ಜಿಮ್‌ನ ಮಾಲೀಕ ಬಿಬಿನ್ ಹಾಜರಿದ್ದರು.