ಜಿಲ್ಲೆ

ಅರ್ಕೇಶ್ವರಸ್ವಾಮಿ ರಥೋತ್ಸವದ ವೈಭವ: ವಿಜೃಂಭಣೆಯಿಂದ ನೆರವೇರಿದ ಕೈಂಕರ್ಯ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಗುತ್ತಲಿನಲ್ಲಿ ಪುರಾಣ ಪ್ರಸಿದ್ಧ ಅರ್ಕೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರೂ ಭಕ್ತರ ಹರ್ಷೋದ್ಧಾರದ ನಡುವೆ ವಿಜೃಂಭಣೆಯಿಂದ ನಡೆಯಿತು.

ಜಿಲ್ಲಾಡಳಿತ ಹಾಗೂ ಹಿಂದು ಧಾರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ ರಥೋತ್ಸವಕ್ಕೂ ಮುನ್ನ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ರುದ್ರಾಭಿಷೇಕ, ಹೋಮದ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ರಥಕ್ಕೆ ಬಲಿ ಪೂಜೆ, ಹಾದು ಹೋಗುವ ಬೀದಿಯಲ್ಲಿ ವಾಸ್ತು ಬಲಿ ಪ್ರಧಾನ, ಉತ್ಸವ ದೇವರ ಮನೆಯಲ್ಲಿ ಮಂಟಪೋತ್ಸವ, ತೇರಡಿ ಉತ್ಸವ, ತೇರಿಗೆ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡೆದವು.

ಬೆಳಗ್ಗೆ 10 ಗಂಟೆಗೆ ಶುಭ ಲಗ್ನದ ಮುಹೂರ್ತದಲ್ಲಿ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಭಕ್ತರ ಸಮ್ಮುಖದಲ್ಲಿ ರಥ ಬೀದಿಯಲ್ಲಿ ನಡೆಯಿತು. ಬ್ರಹ್ಮ ರಥೋತ್ಸವಕ್ಕೆ ಇಷ್ಟಾರ್ಥ ಸಿದ್ಧಿಗಾಗಿ ಭಕ್ತ ಸಮೂಹ ಹಣ್ಣು ಜವನೆ ಎಸೆಯುವ ಮೂಲಕ ಪ್ರಾರ್ಥಿಸಿದರು. ಸಹಸ್ರಾರೂ ಭಕ್ತರು ರಥವನ್ನು ಎಳೆದು ಭಕ್ತಿ ಭಾವ ಪ್ರದರ್ಶಿಸಿದರು. ಬೇಸಿಗೆಕಾಲ ಸುಡು ಬಿಸಿಲಿನಲ್ಲಿ ಬಂದಂತಹ ನೆರೆಯ ಗ್ರಾಮಸ್ಥರಿಗೆ ಹಾಗೂ ಭಕ್ತ ಸಮೂಹಕ್ಕೆ ಮನೆ ಹಾಗೂ ರಸ್ತೆ ಅಂಚಿನಲ್ಲಿ ಮಜ್ಜಿಗೆ ಪಾನಕ ವಿತರಿಸಿದರು.

ನಗರಸಭಾ ಸದಸ್ಯ ಶ್ರೀನಿವಾಸ್ ಮಾತನಾಡಿ, ಅರ್ಕೇಶ್ವರಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಶತಮಾನಗಳಿಂದ ಭಕ್ತರ ಇಷ್ಟಾರ್ಥ ಸಿದ್ಧಿಯನ್ನು ಈಡೇರಿಸುತ್ತಾ ಲೋಕಮಾನ್ಯಗೊಂಡಿದೆ. ಅಪಾರ ಭಕ್ತ ಸಮೂಹವನ್ನು ಹೊಂದಿದೆ. ಸ್ಥಳ ಪುರಾಣ ಪ್ರಕಾರ ಹಾವು ಕಚ್ಚಿದ ಸಂತ್ರಸ್ತರು ಇಲ್ಲಿಗೆ ಬಂದು ಪೂಜೆ ಪುರಸ್ಕಾರ ನೆರವೇರಿಸಿ ಪ್ರಸಾದ ಸ್ವೀಕರಿಸಿದರೆ ವಿಷಮುಕ್ತರಾಗುತ್ತಿದ್ದರು ಎನ್ನುವ ಪ್ರತೀತಿ ಇದೆ ಎಂದು ತಿಳಿಸಿದರು.

ದೇವಾಲಯ ಭಕ್ತ ಸಮೂಹ ಆಗುವ ಆಡಳಿತ ಮಂಡಳಿಯ ಸಹಕಾರದೊಂದಿಗೆ ಅಭಿವೃದ್ಧಿ ಹೊಂದುತ್ತಿದೆ. ಪ್ರತಿದಿನ ಸಾಕಷ್ಟು ಭಕ್ತರು ಪೂಜೆ ಪುರಸ್ಕಾರ ನೆರವೇರಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಪ್ರತಿವರ್ಷ ರಥೋತ್ಸವಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.